ಬೆಳಗಾವಿ: ನಿನ್ನೆ ಸದನದಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಟಿ ರವಿಗೆ ನಾನು ಕೊಲೆಗಡುಕ ಎಂದಿರುವುದು ನಿಜ. ಅದಕ್ಕೆ ಅವರು ಅಶ್ಲೀಲ ಪದ ಬಳಸಿದರು. ಅದರಿಂದ ನನಗೆ ನೋವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅಂಬೇಡ್ಕರ್ ಗೆ ಅವಮಾನವಾಗುವಂತಹ ಪದವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದರು. ಅದರ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ಯಾಕೆಂದರೆ ಅಂಬೇಡ್ಕರ್ ಅವರಿಂದಲೇ ನಾವು ನೀವು ಎಂಎಲ್ಎ, ಎಂಪಿಗಳಾಗಿರುವುದು.
ಧರಣಿ ಮುಗಿಸಿ ನಮ್ಮ ಸ್ಥಾನದಲ್ಲಿ ಕುಳಿತಿದ್ದೆವು. ಆಗ ಸಿಟಿ ರವಿಯವರು ಇದ್ದಕ್ಕಿದ್ದಂತೆ ನಮ್ಮ ನಾಯಕ ರಾಹುಲ್ ಗಾಂಧಿಯನ್ನು ಡ್ರಗ್ ಅಡಿಕ್ಟ್ ಎಂದರು. ಇದು ನಮಗೆ ಸಿಟ್ಟು ತರಿಸಿತು. ಆಗ ನಾನು ತಾವು ಕೂಡಾ ಆಕ್ಸಿಡೆಂಟ್ ಮಾಡಿದ್ದೀರಿ, ನೀವು ಕೊಲೆಗಾರರಾಗ್ತೀರಿ ಎಂದೆ. ಆಗ ಅವರು ನನಗೆ ಹೇಳಬಾರದ ಪದವನ್ನು ಹಲವು ಬಾರಿ ಹೇಳಿದರು ಎಂದು ಭಾವುಕರಾಗಿ ಹೇಳಿದ್ದಾರೆ.
ಆದರೆ ಇದಕ್ಕೆಲ್ಲಾ ನಾನು ಹೆದರಲ್ಲ. ನಾನೊಬ್ಬ ಮಹಿಳೆ, ತಾಯಿ, ಸಹೋದರಿ, ಅತ್ತೆ. ನನಗೆ ಆ ಥರಾ ಹೇಳಿದ್ದಕ್ಕೆ ನೋವಾಗಿದೆ. ಇಲ್ಲಿಯವರೆಗೂ ಒಂದು ಇರುವೆಗೂ ಕಾಟ ಕೊಟ್ಟಿಲ್ಲ. ಕೆಟ್ಟವರನ್ನು ಕಂಡರೆ ದೂರ ಇರೋಳು. ಆ ವೇದಿಕೆಯಲ್ಲಿ ಎಲ್ಲರೂ ದೃತರಾಷ್ಟ್ರರಾದರು. ನನ್ನ ಪಕ್ಷದವರು ಮಾತ್ರ ಬೆನ್ನಿಗೆ ನಿಂತರು ಎಂದಿದ್ದಾರೆ.
ಇನ್ನು ಸಿಟಿ ರವಿಗೆ ತಾನು ಕೊಲೆಗಡುಕ ಎಂದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆ ಮಾತಿಗೆ ನಾನು ಬದ್ಧಳಾಗಿದ್ದೇನೆ. ರಾಹುಲ್ ಗಾಂಧಿಯನ್ನು ವಿನಾಕಾರಣ ಡ್ರಗ್ ಅಡಿಕ್ಟ್ ಎಂದಿದ್ದು ನನಗೆ ಕೋಪ ತಂದಿತ್ತು. ರಾಜ್ಯ ಸಭೆ ಎಂದರೆ ಬುದ್ಧಿವಂತರ ಸದನ ಎನ್ನುತ್ತಾರೆ. ಆದರೆ ನಿನ್ನೆ ಆಗಿದ್ದು ಏನು? ಒಬ್ಬ ಹೆಣ್ಣಿಗೆ ಅವಮಾನವಾಗುವಂತಹ ಪದಗಳನ್ನು ಸಹಿಸಲು ಹೇಗೆ ಸಾಧ್ಯ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.