Select Your Language

Notifications

webdunia
webdunia
webdunia
webdunia

ಲಾಠಿ ಪ್ರಹಾರ ಪ್ರಕರಣ: ವಿಧಾನಸಭೆಯಲ್ಲಿ ಕೋಲಾಹಲ

ಲಾಠಿ ಪ್ರಹಾರ ಪ್ರಕರಣ: ವಿಧಾನಸಭೆಯಲ್ಲಿ ಕೋಲಾಹಲ
ಬೆಂಗಳೂರು , ಶುಕ್ರವಾರ, 4 ಮಾರ್ಚ್ 2016 (13:06 IST)
ಶಾಶ್ವತ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ರೈತರ ಮೇಲಿನ ಲಾಠಿ ಪ್ರಹಾರ ಪ್ರಕರಣ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಗದ್ದಲಕ್ಕೆ ಕಾರಣವಾಯಿತು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಈ ಕುರಿತಂತೆ ಮಾತಿನ ಚಕಮಕಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಗರಂ ಆಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಎಲ್ಲ ವಿಚಾರವನ್ನು ಸಹ ರಾಜಕೀಯಗೊಳಿಸುವುದು ಬೇಡ ಎಂದಿದ್ದಾರೆ. 
 
ಇಂದು ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಲಾಠಿಚಾರ್ಜ್ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ, ಜೆಡಿಎಸ್ ಪಟ್ಟು ಹಿಡಿದವು. ಸದನದ ಬಾವಿಗಿಳಿದು ಧರಣಿ ನಡೆಸಿದ ಜೆಡಿಎಸ್- ಬಿಜೆಪಿ ಸದಸ್ಯರು ಸ್ಪೀಕರ್ ಕಾಗೋಡು ತಿಮ್ಮಪ್ಪ ಚರ್ಚೆಗೆ ಅವಕಾಶ ನೀಡಿದ ಮೇಲೆ ಪ್ರತಿಭಟನೆಯನ್ನು ಕೈ ಬಿಟ್ಟರು. 
 
ವಿರೋಧ  ನಾಯಕ ಜಗದೀಶ್ ಶೆಟ್ಟರ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ವಾಕ್ಸಮರ ನಡೆಯಿತು. ಮಾಜಿ ಸಿಎಂ ಮತ್ತು ಹಾಲಿ ಸಿಎಂ ಪರಷ್ಪರ ಮೂದಲಿಸಿಕೊಂಡರು. ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಅರಿವಿದ್ದರೂ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಂಡಿರಲಿಲ್ಲ. ಗೃಹ ಇಲಾಖೆ ಸಂಪೂರ್ಣ ವೈಫಲ್ಯವನ್ನು ಕಂಡಿತ್ತು. ನಿನ್ನೆ ನಡೆದ ಘಟನೆಯ ಹೊಣೆ ಹೊತ್ತು ಸಿಎಂ ಬೇಸರತ್ ಕ್ಷಮೆ ಯಾಚಿಸಬೇಕು ಎಂದು ಶೆಟ್ಟರ್ ಆಗ್ರಹಿಸಿದರು. 
 
ವಿರೋಧ ಪಕ್ಷದವರ ಗಲಾಟೆಯಿಂದ ಗರಂ ಆದ ಸಿದ್ದರಾಮಯ್ಯ ಗೋಲಿಬಾರ್ ಸರ್ಕಾರಕ್ಕೆ ಎಂದು ಬಾಯಿ ತಪ್ಪಿ ಕೂಗುತ್ತಾ ಪ್ರತಿಪಕ್ಷಗಳತ್ತ ಕೈಬೀಸಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿಯವರು ಧಿಕ್ಕಾರ ಎಂದು ಕೂಗುತ್ತಿದ್ದಂತೆಯೇ, ಸಿಎಂ ಅದು ನಿಮಗೆ ಎಂದರು.
 
ಬಳಿಕ ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆ ಕುರಿತು ರೈತರಿಗೆ ಗೊಂದಲಗಳಿವೆ. ಆ ಗೊಂದಲಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಹೀಗಾಗಿ ಚಿಕ್ಕಬಳ್ಳಾಪುರ, ಕೋಲಾರ ಪ್ರದೇಶಗಳಲ್ಲಿ ಸರ್ಕಾರಿ ವಿರೋಧಿ ಧೋರಣೆ ಬಂದಿದೆ. ಅದನ್ನು ಪರಿಹರಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದ. ಯಾವ ಸ್ಥಳದಲ್ಲಿ ಪ್ರತಿಭಟನೆ ಮಾಡಬೇಕು ಎನ್ನುವುದನ್ನು ಸರ್ಕಾರ ಮೊದಲೇ ತಿಳಿಸಬೇಕಿತ್ತು. ಅದನ್ನು ಬಿಟ್ಟು ಲಾಠಿ ಪ್ರಹಾರ ನಡೆಸಿದ್ದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. 
 
ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಕೂಡ ಅಸಮಧಾನ ವ್ಯಕ್ತಪಡಿಸಿದ್ದು,ನೀರಾವರಿ ಯೋಜನೆಗಾಗಿ ನಡೆದ ಹೋರಾಟದ ವೇಳೆ ಪೊಲೀಸರು ಲಾಠಿ ಬೀಸಿದ್ದು ಸರಿಯಲ್ಲ, ಈ ಸಮಸ್ಯೆ ಬಗ್ಗೆ ಒಂದು ಸಮಿತಿ ರಚನೆ ಮಾಡಿ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.   
 
ವಿಧಾನಪರಿಷತ್‌ನಲ್ಲಿ ಸಹ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. 

Share this Story:

Follow Webdunia kannada