ಬೆಂಗಳೂರು: ಇದೀಗ ಬರಗಾಲಕ್ಕೀಡಾಗಿರುವ ಕರ್ನಾಟಕದಲ್ಲಿ ಯುಗಾದಿ ನಂತರ ಒಳ್ಳೆ ಮಳೆ, ಬೆಳೆಯಾಗಲಿದೆ. ಆದರೆ ಒಬ್ಬ ಧಾರ್ಮಿಕ ಮುಖಂಡನ ಸಾವಾಗಲಿದೆ ಎಂದು ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಮಳೆಯಿಲ್ಲದೇ ಬರಗಾಲದ ಸ್ಥಿತಿಯಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಆದರೆ ಈ ವರ್ಷ ಯುಗಾದಿ ನಂತರ ಉತ್ತಮ ಮಳೆಯಾಗುವ ಸಾಧ‍್ಯತೆಯಿದೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ. ಇದು ರೈತರಿಗೆ ಸಮಾಧಾನಕರ ವಿಚಾರವಾಗಿದೆ.
ಆದರೆ ಯುಗಾದಿ ನಂತರ ಆಪತ್ತೂ ಇದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಧಾರ್ಮಿಕ ಮುಖಂಡರೊಬ್ಬರ ಸಾವಾಗುತ್ತದೆ. ಬಾಂಬ್ ಸ್ಪೋಟ, ಭೂಕಂಪವಾಗುವ ಸಾಧ‍್ಯತೆಯಿದೆ ಎಂದಿದ್ದಾರೆ. ಆದರೆ ರಾಜ್ಯ ರಾಜಕೀಯದ ಬಗ್ಗೆ ಯುಗಾದಿ ನಂತರವಷ್ಟೇ ಹೇಳುವುದಾಗಿ ತಿಳಿಸಿದ್ದಾರೆ.
ಯುಗಾದಿ ನಂತರವಷ್ಟೇ ರಾಜ್ಯ, ರಾಷ್ಟ್ರ ರಾಜಕಾರಣದ ಬಗ್ಗೆ ಹೇಳಬಹುದು. ಈಗಿನ ಪ್ರಕಾರ ಪ್ರಪಂಚದಾದ್ಯಂತ ಯುದ್ಧ, ಸ್ಪೋಟ, ಸಾವು ನೋವಿನ ಸಂಭವವಿದೆ ಎಂದು ಆತಂಕ ಹುಟ್ಟಿಸಿದ್ದಾರೆ. ಈ ಮೊದಲು ಹೊಸ ವರ್ಷದಂದು ಭವಿಷ್ಯ ನುಡಿದಿದ್ದ ಸ್ವಾಮೀಜಿ ಹೊಸ ವರ್ಷದಲ್ಲಿ ಮಳೆ, ನೀರಿಲ್ಲದೇ ಜನ ತೊಂದರೆ ಅನುಭವಿಸಲಿದ್ದಾರೆ ಎಂದಿದ್ದರು. ದೇವರನ್ನು ನಂಬುವುದೊಂದೇ ಪರಿಹಾರ ಎಂದಿದ್ದರು.