Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಕಿಸ್ ಮೇಳ ಆಯೋಜನಕ್ಕೆ ಸಿದ್ದತೆ: ಭಾರಿ ಪ್ರತಿಭಟನೆ ಸಾಧ್ಯತೆ

ಬೆಂಗಳೂರಿನಲ್ಲಿ ಕಿಸ್ ಮೇಳ ಆಯೋಜನಕ್ಕೆ ಸಿದ್ದತೆ: ಭಾರಿ ಪ್ರತಿಭಟನೆ ಸಾಧ್ಯತೆ
ಬೆಂಗಳೂರು , ಬುಧವಾರ, 19 ನವೆಂಬರ್ 2014 (20:17 IST)
ದೇಶದಾದ್ಯಂತ ವಿವಾದದ ಅಲೆ ಎಬ್ಬಿಸಿರುವ ‘ಕಿಸ್‌ ಆಫ್‌ ಲವ್‌’ (ಪ್ರೀತಿಯ ಮುತ್ತು) ಆಂದೋಲನ ಇದೀಗ ಉದ್ಯಾನನಗರಿಗೂ ವ್ಯಾಪಿಸಿದ್ದು, ಪರಸ್ಪರ ಪ್ರೀತಿಗೆ ಪಾತ್ರರಾದವರು ಸಾರ್ವಜನಿಕವಾಗಿ ಮುತ್ತು ವಿನಿಮಯ ಮಾಡಿಕೊಳ್ಳುವಂತಹ ಚುಂಬನ ಮೇಳ ಆಯೋಜಿಸಲು ಸಿದ್ಧತೆಗಳು ನಡೆದಿವೆ.
 
ಸಾರ್ವಜನಿಕವಾಗಿ ನಡೆಯಲಿರುವ ಈ ಮುತ್ತಿನ ಅಭಿಯಾನವು ಪರ–ವಿರೋಧದ ವಾದವನ್ನು ಹುಟ್ಟುಹಾಕಿದೆ. ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ‘ಇಂತಹ ಅಭಿಯಾನ ನಡೆಸುವ ಅಗತ್ಯವಿಲ್ಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ‘ಕಾನೂನು ಚೌಕಟ್ಟಿನಲ್ಲಿ ಯಾವುದೇ ಆಚರಣೆ ನಡೆಸಲು ಅವಕಾಶವಿದೆ’ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟಪಡಿಸಿದ್ದಾರೆ.
 
ಮಾನವ ಹಕ್ಕುಗಳ ಹೋರಾಟಗಾರ್ತಿ, 23ರ ಹರೆಯದ ರಚಿತಾ ತನೇಜಾ ‘ಕಿಸ್‌ ಆಫ್‌ ಲವ್‌’ ಬೆಂಗಳೂರು ಆಂದೋಲನದ ನೇತೃತ್ವ ವಹಿಸಿದ್ದಾರೆ. ‘ನೈತಿಕ ಪೊಲೀಸ್‌ಗಿರಿ ವಿರುದ್ಧದ ನಮ್ಮ ಈ ಆಂದೋಲನ ನಗರದಲ್ಲಿ ಖಂಡಿತವಾಗಿಯೂ ನಡೆಯಲಿದೆ’ ಎಂದು ರಚಿತಾ ಫೇಸ್‌ಬುಕ್‌ನಲ್ಲಿ ಬರೆದು­ಕೊಂಡಿದ್ದಾರೆ.
 
‘ನೈತಿಕ ಪೊಲೀಸ್‌ಗಿರಿಯನ್ನು ನಾನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದೇನೆ. ಅಲ್ಲದೆ, ಸಾರ್ವಜನಿಕವಾಗಿ ಚುಂಬಿಸುವಲ್ಲಿ ಯಾವುದೇ ತಪ್ಪಿಲ್ಲ’ ಎಂದು ಅವರು ಹೇಳಿದ್ದಾರೆ. ‘ಪರಸ್ಪರ ಪ್ರೀತಿಗೆ ಪಾತ್ರರಾದವರು ಭಯಪಡದೆ ಜೊತೆಯಾಗಿ ಈ ಅಭಿಯಾನಕ್ಕೆ ಬರಬೇಕು. ಸಾರ್ವಜನಿಕವಾಗಿ ಮುತ್ತಿನ ವಿನಿಮಯ ಮಾಡಿಕೊಳ್ಳಬೇಕು’ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.
 
ಕೇರಳದ ಕೊಯಿಕ್ಕೋಡ್‌ನ ಕಾಫಿ ಮಳಿಗೆಯಲ್ಲಿ ಕೆಲ ಪ್ರೇಮಿಗಳು ಸಾರ್ವಜನಿಕವಾಗಿ ಚುಂಬಿಸಿದ್ದನ್ನು ಸಹಿಸದ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು. ಈ ಘಟನೆಗೆ ಪ್ರತಿಕ್ರಿಯೆಯಾಗಿ ‘ಕಿಸ್‌ ಆಫ್‌ ಲವ್‌’ ಆಂದೋಲನವನ್ನು ಆರಂಭಿಸಲಾಗಿದ್ದು, ನ. 2ರಂದು ಕೊಚ್ಚಿಯಲ್ಲಿ ಮೊದಲ ‘ಮುತ್ತಿನ ಮೇಳ’ ನಡೆದಿತ್ತು. ಬೆಂಗಳೂರು ಮೇಳದಲ್ಲಿ ನೂರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
 
ಕೊಚ್ಚಿಯಲ್ಲಿ ಈ ಆಂದೋಲನ ಆಯೋಜಿಸಿದ್ದ ಸಂಘಟಕರು ಬೆಂಗಳೂರು ‘ಕಿಸ್‌ ಆಫ್‌ ಲವ್‌’ಗೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ. ಎಂ.ಜಿ. ರಸ್ತೆಯ ಬುಲೆವಾರ್ಡ್‌ನಲ್ಲಿ ಈ ಮೇಳ ಸಂಘಟಿಸಲು ಉದ್ದೇಶಿಸಲಾಗಿತ್ತು. ಆದರೆ, ಬಹುತೇಕ ಪ್ರತಿಭಟನೆಗಳು ನಡೆಯುವ ಟೌನ್‌ಹಾಲ್‌ ಮುಂದೆಯೇ ಈ ಆಂದೋಲನ ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಸಂಘಟಕರು ಬಂದಿದ್ದಾರೆ ಎಂದು ಹೇಳಲಾಗಿದೆ.
 
ಬೆದರಿಕೆ: ಬೆಂಗಳೂರಿನಲ್ಲಿ ಮುತ್ತಿನ ಮೇಳ ನಡೆಯುವ ಸುದ್ದಿ ಹರಡುತ್ತಿದ್ದಂತೆ ರಚಿತಾ ಅವರ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶವೂ ಬಂದಿದೆ. ‘ಕೊನೆಗೂ ಈ ಆಂದೋಲನ ನಮ್ಮ ಬೆಂಗಳೂರಿಗೆ ಬಂದಿದೆ. ನಾವು ಖಂಡಿತವಾಗಿಯೂ ಅಲ್ಲಿರುತ್ತೇವೆ. ಈ ಕ್ಷಣಕ್ಕಾಗಿ ನಾವು ಬಹಳ ದಿನಗಳಿಂದ ಕಾಯುತ್ತಿದ್ದೆವು. ನಾವು ಬರುತ್ತಿರುವುದು ನಿಮ್ಮ ಮೇಲೆ ಕಲ್ಲು ಎಸೆಯುವ ಸಲುವಾಗಿಯೇ ಹೊರತು ಮೇಳದಲ್ಲಿ ಪಾಲ್ಗೊಳ್ಳಲು ಅಲ್ಲ’ ಎಂದು ಆ ಸಂದೇಶದಲ್ಲಿ ಬರೆಯಲಾಗಿದೆ. ‘ನ.22ರಂದೇ ಈ ಆಂದೋಲನವನ್ನು ನಡೆಸುವ ಉದ್ದೇಶವಿತ್ತು. ಆದರೆ, ಬೆದರಿಕೆ ಸಂದೇಶಗಳು ಬಂದಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ್ದೇನೆ. ಈಗ ನ. 29ರಂದು ಈ ಮೇಳವನ್ನು ನಡೆಸುವ ಉದ್ದೇಶವಿದೆ’ ಎಂದು ರಚಿತಾ ಹೇಳುತ್ತಾರೆ.
 
‘ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌. ರೆಡ್ಡಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವಂತೆ ಮನವಿ ಮಾಡುತ್ತೇನೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಮತ್ತು ಯಾರಿಗೂ ತೊಂದರೆ ಆಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ಅವರು ವಿವರಿಸುತ್ತಾರೆ.
 
ಕೇರಳದಲ್ಲಿ ಈ ಮುತ್ತಿನ ಆಂದೋಲನಕ್ಕಾಗಿ ‘ಕಿಸ್‌ ಆಫ್‌ ಲವ್‌’ ಹಾಗೂ ‘ಕಿಸ್‌ ಇನ್‌ ಸ್ಟ್ರೀಟ್‌’ (ಬೀದಿಯಲ್ಲಿ ಮುತ್ತು) ಎಂಬ ಫೇಸ್‌ಬುಕ್‌ ಖಾತೆಗಳನ್ನೇ ತೆರೆಯಲಾಗಿದೆ. ಈ ಖಾತೆಗಳಲ್ಲೂ ಬೆಂಗಳೂರು ಕಾರ್ಯಕ್ರಮದ ವಿವರಗಳು ಮೂಡಿಬರಲಿವೆ ಎಂದು ತಿಳಿದುಬಂದಿದೆ. ಈಗಾಗಲೇ ಹೈದರಾಬಾದ್‌, ಕೋಲ್ಕತ್ತ ಮತ್ತು ದೆಹಲಿಯಲ್ಲೂ ‘ಕಿಸ್‌ ಆಫ್‌ ಲವ್‌’ನ ಸದ್ದು ಮೊಳಗಿದೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿರುವ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಈ ಆಂದೋಲನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
 

Share this Story:

Follow Webdunia kannada