ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಕೆಲವೆಡೆ ಮಳೆಯಾಗುತ್ತಿದೆ. ಇದು ಇಂದೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.
ನಿನ್ನೆ ದಿನವಿಡೀ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು.ಮಕರ ಸಂಕ್ರಾಂತಿ ಹಬ್ಬದ ಜೊತೆಗೆ ಕೆಲವೆಡೆ ಸಣ್ಣ ಹನಿ ಮಳೆಯಾದ ವರದಿಯಾಗಿತ್ತು. ಇಂದೂ ಮೋಡದ ವಾತಾವರಣವಿದ್ದು ಮಳೆಯಾಗುವ ಸೂಚನೆಯಿದೆ.
ಬೆಂಗಳೂರು ಮಾತ್ರವಲ್ಲದೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ನಿನ್ನೆ ತಕ್ಕ ಮಟ್ಟಿಗೆ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಮಳೆಯಾದ ಬಗ್ಗೆ ವರದಿಯಾಗಿತ್ತು. ಇಂದೂ ಮಳೆಯ ನಿರೀಕ್ಷೆಯಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಜನವರಿ 16 ರವರೆಗೆ ಅಂದರೆ ನಾಳೆಯವರೆಗೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ಮಂಡ್ಯ, ಹಾಸನ, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆಯಿದೆ.