ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಹವಾಮಾನ ಅತ್ಯಂತ ಕಠಿಣವಾಗಿದ್ದು, ಜನರು ಎಚ್ಚರವಾಗಿರುವುದು ಅಗತ್ಯ. ಹವಾಮಾನ ವರದಿಯ ವಿವರ ಇಲ್ಲಿದೆ ನೋಡಿ.
ಕಳೆದ ಭಾನುವಾರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಇದಾದ ಬಳಿಕ ಮತ್ತೆ ಚಳಿಯ ವಾತಾವರಣ ಮುಂದುವರಿದಿದೆ. ಮುಂದಿನ ಕೆಲವು ದಿನಗಳಿಗೆ ಮಳೆಯ ಸೂಚನೆ ಇಲ್ಲ.
ಹಾಗಿದ್ದರೂ ರಾಜ್ಯದಲ್ಲಿ ಮುಂದಿನ ಐದು ದಿನ ತೀವ್ರ ಚಳಿಯಿರಲಿದೆ, ಸಾರ್ವಜನಿಕರು ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಹವಾಮಾನ ವರದಿ ಹೇಳಿದೆ. ಜನವರಿ 22 ರಿಂದ 27 ರವರೆಗೆ ಕೆಲವು ಜಿಲ್ಲೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ-ಬಿಸಿಲು ಕಣ್ಣಾಮುಚ್ಚಾಲೆಯಾಡುತ್ತಿದ್ದು ಚಳಿಯೂ ಇದೆ. ಮುಂದಿನ ಕೆಲವು ದಿನ ಇದೇ ವಾತಾವರಣ ಮುಂದುವರಿಯಲಿದೆ. ಇಂದು ಬಹುತೇಕ ಒಣಹವೆಯಿರಲಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ತಾಪಮಾನ ಕನಷ್ಠ ಮಟ್ಟಿಕ್ಕಿಳಿಯಲಿದೆ. ಹೀಗಾಗಿ ಸಂಜೆ ಮತ್ತು ಬೆಳಗ್ಗಿನ ಹೊತ್ತು ವೃದ್ಧರು, ಮಕ್ಕಳು ಹೊರಗೆ ಹೋಗದಿರುವುದೇ ಲೇಸು. ಬೆಂಗಳೂರಿನಲ್ಲಿ ತಾಪಮಾನ 15 ಡಿಗ್ರಿಯಷ್ಟಿದ್ದು, ಇದು ಇನ್ನಷ್ಟು ಕಡಿಮೆಯಾದರೂ ಅಚ್ಚರಿಯಿಲ್ಲ ಎಂದು ಹವಾಮಾನ ವರದಿ ಹೇಳಿದೆ.