Select Your Language

Notifications

webdunia
webdunia
webdunia
webdunia

ಸಿದ್ದು ಸಂಪುಟದ ಸಚಿವರ ಕಾರ್ಯವೈಖರಿಯಿಂದ ಕಾಂಗ್ರೆಸ್‌ಗೆ ಸೋಲು

ಸಿದ್ದು ಸಂಪುಟದ ಸಚಿವರ ಕಾರ್ಯವೈಖರಿಯಿಂದ ಕಾಂಗ್ರೆಸ್‌ಗೆ ಸೋಲು
ಬೆಂಗಳೂರು , ಭಾನುವಾರ, 18 ಮೇ 2014 (14:30 IST)
ಸಿದ್ದರಾಮಯ್ಯ ಸಂಪುಟದ  ಸಚಿವರ ಪೈಕಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ಲೋಕಸಭಾ ಚುನಾವಣೆಯಲ್ಲಿ ಯಶಸ್ಸಿನ ನಗೆ ಬೀರಿದ್ದಾರೆ. ಬಹುತೇಕ ಸಚಿವರು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
 
ಮುಖ್ಯಮಂತ್ರಿ ಸೇರಿ ಮೂವರು ಸಚಿವರಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲೇ ಕಾಂಗ್ರೆಸ್‌ ಮುಗ್ಗರಿಸಿದೆ. ಬೆಂಗಳೂರಿನಲ್ಲಿ ಐವರು ಸಚಿವರಿದ್ದಾರೆ. ಇಲ್ಲಿ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಭಾರಿ ಅಂತರದ ಜಯ ಕಂಡಿದೆ. ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕೋಡಿ ಮತ್ತು ತುಮಕೂರಿನ ಹೊರತಾಗಿ ಎಲ್ಲ ಕಡೆಗಳಲ್ಲೂ ಸಚಿವರು ಹಿನ್ನಡೆ ಕಂಡಿದ್ದಾರೆ.
 
ಗುಲ್ಬರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿದ್ದ ಕೇಂದ್ರ ಸಚಿವರು ಸ್ವಂತ ಶಕ್ತಿಯ ಮೇಲೆ ಗೆಲುವು ಸಾಧಿಸಿದ್ದಾರೆ.
 
ರಾಯಚೂರು ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್‌ ಶಾಸಕರಿದ್ದು, ಸಂಪುಟದಲ್ಲಿ ಪ್ರಾತಿನಿಧ್ಯವೇ ಇಲ್ಲ. ಆದರೂ ಅಲ್ಲಿ ಕಾಂಗ್ರೆಸ್‌ನ ಬಿ.ವಿ.ನಾಯಕ ಗೆಲುವಿನ ನಗೆ ಬೀರಿದ್ದಾರೆ.
 
ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಎರಡನೇ ಬಾರಿ ಸಹೋದರನನ್ನು ಸಂಸತ್ತಿಗೆ ಕಳುಹಿಸುವಲ್ಲಿ ಯಶಸ್ಸು ಕಂಡಿದ್ದಾರೆ.
 
ಚಿತ್ರದುರ್ಗದಲ್ಲಿ ಬಿ.ಎನ್‌.­ಚಂದ್ರಪ್ಪ ಅವರಿಗೆ ಟಿಕೆಟ್‌ ನೀಡಿದಾಗ, ‘ಹೊರಗಿನವರು’ ಎಂಬ ಅಪಸ್ವರ ಎದ್ದಿತ್ತು. ಆದರೆ, ಸ್ವತಃ ಅಭ್ಯರ್ಥಿಯಂತೆ ಚುನಾವಣಾ ಅಖಾಡಕ್ಕಿಳಿದು ಕೆಲಸ ಮಾಡಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಒಂದು ಲಕ್ಷಕ್ಕೂ ಅಧಿಕ ಮತಗಳ ಗೆಲುವು ತಂದುಕೊಡುವಲ್ಲಿ ಸಫಲರಾಗಿದ್ದಾರೆ.
 
ಸಕ್ಕರೆ ಸಚಿವ ಪ್ರಕಾಶ್‌ ಬಿ.ಹುಕ್ಕೇರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕಿದ್ದರು. ಪಟ್ಟುಬಿಡದೆ ಅವರ ಮನವೊಲಿಸಿದ್ದ ಮುಖ್ಯಮಂತ್ರಿ, ಚುನಾವಣಾ ಉಸ್ತುವಾರಿಯನ್ನು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಹೆಗಲಿಗೆ ಹಾಕಿದ್ದರು. ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದವರ ಬೆನ್ನಿಗೆ ನಿಂತ ಅಬಕಾರಿ ಸಚಿವರು ಸಕ್ಕರೆ ಸಚಿವರನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಬೆಳಗಾವಿಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ.
 
ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮತ್ತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಜಂಟಿ ಹೋರಾಟಕ್ಕೆ ಯಶಸ್ಸು ದೊರೆತಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಎಸ್‌.ಪಿ.ಮುದ್ದಹನುಮೇಗೌಡ ದೊಡ್ಡ ಅಂತರದಲ್ಲೇ ಬಿಜೆಪಿಯ ಹಾಲಿ ಸಂಸದ ಜಿ.ಎಸ್‌.ಬಸವರಾಜು ವಿರುದ್ಧ ಗೆಲುವು ಸಾಧಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಸೋಲು ಕಂಡಿದ್ದ ಪರಮೇಶ್ವರ್‌ ಈಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತಂದ ಖುಷಿಯಲ್ಲಿದ್ದಾರೆ.
 
ಮುಗ್ಗರಿಸಿದ ಸಚಿವರು:
 
ಹಿರಿಯ ಸಚಿವರಾದ ಆರ್‌.ವಿ.ದೇಶಪಾಂಡೆ ಮತ್ತು ಶಾಮನೂರು ಶಿವಶಂಕರಪ್ಪ ಅವರ ಮಕ್ಕಳೇ ಲೋಕಸಭಾ ಚುನಾವಣಾ ಕಣದಲ್ಲಿದ್ದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಎದುರು ದೇಶಪಾಂಡೆ ಅವರ ಪುತ್ರ ಪ್ರಶಾಂತ ದೇಶಪಾಂಡೆ 1,40,700 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ದಾವಣಗೆರೆ ಕ್ಷೇತ್ರದಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್‌ ಎದುರು 17,607 ಮತಗಳ ಅಂತರದಲ್ಲಿ ಪರಾಭವ ಹೊಂದಿದ್ದಾರೆ. ಇದರಿಂದ ಇಬ್ಬರು ಸಚಿವರಿಗೂ ಮುಖಭಂಗ ಆದಂತಾಗಿದೆ.
 
ಆರು ತಿಂಗಳ ಹಿಂದೆ ಪಕ್ಷದ ತೆಕ್ಕೆಗೆ ಬಂದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಸಚಿವ ಎಂ.ಎಚ್‌.ಅಂಬರೀಷ್‌ ಮತ್ತು ರಾಜ್ಯಸಭಾ ಸದಸ್ಯ ಎಸ್‌.ಎಂ.ಕೃಷ್ಣ ಬಣಗಳ ನಡುವಿನ ಒಳಜಗಳ ಚುನಾವಣೆ ಸಮಯದಲ್ಲೇ ತಾರಕಕ್ಕೇರಿತ್ತು. ಕಾಂಗ್ರೆಸ್‌ ಅಭ್ಯರ್ಥಿ ರಮ್ಯಾ ಸೋಲಿಗೆ ಆಂತರಿಕ ಕಲಹವೇ ಕಾರಣ ಎಂಬುದು ಪಕ್ಷದೊಳಗೆ ಚರ್ಚೆಯಲ್ಲಿದೆ.
 
ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಏಳು ಶಾಸಕರಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಇಲ್ಲಿ ಕಾಂಗ್ರೆಸ್‌ ನೇತೃತ್ವ ವಹಿಸಿದ್ದರು. ಆದರೆ, ಅವರ ಪ್ರಯತ್ನ ಕೈಗೂಡಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕಿಮ್ಮನೆ ರತ್ನಾಕರ ಸೇರಿದಂತೆ ಕಾಂಗ್ರೆಸ್‌ನ ನಾಲ್ವರು ಶಾಸಕರಿದ್ದಾರೆ. ಆದರೆ, ಬಿಜೆಪಿ ರಾಜ್ಯದಲ್ಲಿ ಅತ್ಯಧಿಕ ಅಂತರದ ಗೆಲುವು ಸಾಧಿಸಿರುವುದು ಇಲ್ಲಿ. ಸಚಿವರ ಕ್ಷೇತ್ರದಲ್ಲೂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ದೊಡ್ಡ ಮುನ್ನಡೆಯೇ ಸಿಕ್ಕಿದೆ.
 
ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್‌ ಮತ್ತು ಕೆ.ಅಭಯಚಂದ್ರ ಜೈನ್‌ ಅವರ ಬೆಂಬಲದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಈ ಬಾರಿ ಗೆಲುವಿನ ನಗೆ ಬೀರಬಹುದು ಎಂಬ ನಿರೀಕ್ಷೆ ಪಕ್ಷದಲ್ಲಿತ್ತು. ಆದರೆ, ಮೂವರು ಸಚಿವರಿದ್ದೂ ಇಲ್ಲಿ ಪೂಜಾರಿ ಹೀನಾಯವಾಗಿ ಸೋಲು ಕಂಡಿದ್ದಾರೆ. ಪಕ್ಕದ ಉಡುಪಿಯಲ್ಲೂ ಪಕ್ಷದ ಅಭ್ಯರ್ಥಿಗೆ ಮುನ್ನಡೆ ತಂದುಕೊಡುವಲ್ಲಿ ಸಚಿವ ವಿನಯಕುಮಾರ್‌ ಸೊರಕೆ ವಿಫಲವಾಗಿದ್ದಾರೆ.
 
ಮೀಸಲು ಕ್ಷೇತ್ರಗಳಲ್ಲೇ ಹೆಚ್ಚು ಗೆಲುವು
 
ರಾಜ್ಯದ ಒಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಈ ಪೈಕಿ ಐದು ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವುದು ವಿಶೇಷ.
 
ಮಲ್ಲಿಕಾರ್ಜುನ ಖರ್ಗೆ (ಗುಲ್ಬರ್ಗ), ಕೆ.ಎಚ್‌.ಮುನಿಯಪ್ಪ (ಕೋಲಾರ), ಆರ್.ಧ್ರುವನಾರಾಯಣ (ಚಾಮರಾಜನಗರ) ಮತ್ತು ಬಿ.ಎನ್‌.ಚಂದ್ರಪ್ಪ (ಚಿತ್ರದುರ್ಗ) ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಕಾಂಗ್ರೆಸ್‌ ಸಂಸದರು.
 
ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ವಿ.ನಾಯಕ ಜಯ ಸಾಧಿಸಿದ್ದಾರೆ.
 
.

Share this Story:

Follow Webdunia kannada