ಬೆಂಗಳೂರು: ವಕ್ಫ್ ವಿವಾದದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದೆ. ಮುಸ್ಲಿಮರ ಖಬರಸ್ತಾನಕ್ಕೆ ಕಂದಾಯ ಇಲಾಖೆಯ ಜಮೀನು ನೀಡಲು ಮುಂದಾಗಿರುವುದರ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ.
ರಾಜ್ಯದ 328 ಖಬರಸ್ತಾನಗಳಿಗೆ ಕಂದಾಯ ಇಲಾಖೆ ಜಮೀನು ನೀಡಲು ಮುಂದಾಗಿರುವುದು ವಿವಾದಕ್ಕೀಡು ಮಾಡಿದೆ. ಈಗಾಗಲೇ ವಕ್ಫ್ ಬೋರ್ಡ್ ರೈತರು, ಮಠ-ಮಂದಿರಗಳು, ಸರ್ಕಾರೀ ಜಮೀನುಗಳಿಗೆ ನೋಟಿಸ್ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಬಿಜೆಪಿ ಭಾರೀ ಪ್ರತಿಭಟನೆಯನ್ನೂ ಮಾಡಿತ್ತು.
ಇದೀಗ ಬರೋಬ್ಬರಿ 2750 ಎಕರೆ ಭೂಮಿಯನ್ನು ಮುಸ್ಲಿಮ್ ಖಬರಸ್ತಾನಗಳಿಗೆ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಭೂಮಿಯನ್ನು ಖಬರಸ್ತಾನವಾಗಿ ಪರಿವರ್ತನೆ ಮಾಡಲು ಸರ್ಕಾರ ಮುಂದಾಗಿರುವುದು ಮತ್ತೆ ಟೀಕೆಗೆ ಗುರಿಯಾಗಿದೆ. ವಕ್ಫ್ ಅಧೀನದಲ್ಲಿರುವ ಮಸೀದಿ, ಪ್ರಾರ್ಥನಾ ಮಂದಿರಗಳ ಖಬರಸ್ತಾನಗಳಿಗೆ ಸರ್ಕಾರೀ ಜಮೀನು ನೀಡಲು ಮುಂದಾಗಿದೆ.
ಬೆಂಗಳೂರು, ರಾಯಚೂರು, ಹಾಸನ, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಮಿ ಮಂಜೂರು ಮಾಡಲು ಮುಂದಾಗಿದೆ. ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯು ಪ್ರಗತಿ ಪರಿಶೀಲನಾ ಸಭೆಯಲ್ಲಿ 328 ಖಬರಸ್ತಾನಗಳಿಗೆ ಜಮೀನು ನೀಡುವಂತೆ ಮನವಿ ಮಾಡಿತ್ತು. ಇದಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಸರ್ಕಾರೀ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿ ಭೂಮಿ ಖರೀದಿಸಿ ವಿತರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.