ಬೆಂಗಳೂರು: ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷ ಬಿಜೆಪಿಗೆ ಬ್ರಹ್ಮಾಸ್ತ್ರವೇ ಸಿಕ್ಕಿದೆ.
ಈ ಬಾರಿ ಅಧಿವೇಶನದಲ್ಲಿ ಕಾವೇರಿದ ವಾತಾವರಣ ಕಂಡುಬರುವುದು ಖಚಿತವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗೆ ಮುಡಾ ಅಕ್ರಮ, ವಾಲ್ಮೀಕಿ ನಿಗಮ ಅಕ್ರಮ ಸೇರಿದಂತೆ ಹಲವು ಭ್ರಷ್ಟಾಚಾರದ ಆರೋಪಗಳ ಬ್ರಹ್ಮಾಸ್ತ್ರ ಸಿಕ್ಕಿದೆ. ಈ ಬಾರಿ ಅಧಿವೇಶನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸುವುದಾಗಿ ಈಗಾಗಲೇ ಬಿಜೆಪಿ ಹೇಳಿತ್ತು.
ಅದರಂತೆ ಇಂದಿನಿಂದ ಆರಂಭವಾಗುವ ಅಧಿವೇಶನ ಸುಗಮವಾಗಿಯಂತೂ ನಡೆಯುವುದು ಅನುಮಾನವಾಗಿದೆ. ಬಿಜೆಪಿಗೆ ಜೆಡಿಎಸ್ ಕೂಡಾ ಬೆಂಬಲ ನೀಡುವುದು ಖಚಿತವಾಗಿದೆ. ಒಂದೆಡೆ ವಿಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರೆ ಇತ್ತ ಆಡಳಿತಾರೂಢ ಕಾಂಗ್ರೆಸ್ ಕೂಡಾ ವಿಪಕ್ಷಗಳ ಅಸ್ತ್ರಕ್ಕೆ ಪ್ರತಿತಂತ್ರ ಹೂಡಲು ಸಜ್ಜಾಗಿದೆ.
ಮುಡಾ ಅಕ್ರಮದಲ್ಲಿ ಈ ಹಿಂದಿನ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿಯವರ ವಿರುದ್ಧ ಮಾಡಿದ್ದ ಆರೋಪಗಳು, ಬಿ ಶ್ರೀರಾಮುಲು ಸಾರಿಗೆ ಸಚಿವರಾಗಿದ್ದಾಗ ನಡೆದಿದ್ದ ಹಗರಣವನ್ನು ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಿದ್ಧವಾಗಿದೆ. ಹೀಗಾಗಿ ಈ ಬಾರಿ ಸುಗಮ ಕಲಾಪವಂತೂ ನಡೆಯುವ ಸಾಧ್ಯತೆಯಂತೂ ಅಲ್ಲ.