ಸಚಿವ ಎಂ.ಬಿ. ಪಾಟೀಲ್ ಮತಕ್ಷೇತ್ರ ಬಬಲೇಶ್ವರಕ್ಕೆ ಹೋಗುವಾಗ ಪೊಲೀಸ್ ಭದ್ರತೆ ತೆಗೆದುಕೊಂಡು ಹೋಗ್ತೇನಿ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದ್ದಾರೆ.
ವಿಜಯಪುರದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಕ್ತರು ಕರೆದ್ರೆ ಜಗದ್ಗುರುಗಳು ಹೋಗುವುದು ಸಾಮಾನ್ಯ. ಪೂರ್ವಾಗ್ರಹ ಪೀಡೀತರಾಗಿ ನಮಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ನಮ್ಮ ಕಾರ್ ಅಡ್ಡಗಟ್ಟಿ ಕೆಲವರು ಧಾರ್ಮಿಕ ಕಾರ್ಯಕ್ಕೆ ಅಡ್ಡಿ ಉಂಟು ಮಾಡಿ ಸಚಿವ ಎಂ.ಬಿ. ಪಾಟೀಲರ ಪರ ಘೋಷಣೆ ಕೂಗಿದರು. ಧರ್ಮ ಮತ್ತು ಭಕ್ತರ ಸಲುವಾಗಿ ಎಂಥ ದೌರ್ಜನ್ಯ ಕೂಡ ಎದುರಿಸಲು ನಾವು ಸಿದ್ದ. ಹೆದರಿಸಿ ಬೆದರಿಸಿ ನಮ್ಮ ಕರ್ತವ್ಯಕ್ಕೆ ಧಕ್ಕೆ ಮಾಡಿದರೆ ಜಗ್ಗೋದಿಲ್ಲ ಎಂದು ಗುಡುಗಿದರು.
ಭಕ್ತರ ಇಷ್ಟಾರ್ಥ ಈಡೇರಿಸುವುದು ನಮ್ಮ ಕರ್ತವ್ಯ. ಯಾರೋ ಬಾಡಿಗೆ ಜನ ವಿರೋಧಿಸಿದರೆ ನಾವು ಹಿಂದೆ ಸರಿಯೋದಿಲ್ಲ. ಚುನಾವಣೆ ಒಂದೇ ಕ್ಷೇತ್ರದಲ್ಲಿ ಇಲ್ಲ, ನೀತಿ ಸಂಹಿತೆ ರಾಜ್ಯದೆಲ್ಲೆಡೆ ಇದೆ. ಉಳಿದೆಡೆ ಭಕ್ತರು ವಿಜಯವಾಗಲಿ ಎಂದು ಆಶೀರ್ವಾದ ಪಡೆಯುತ್ತಾರೆ. ದುರ್ದೈವ ಬಬಲೇಶ್ವರ ಕ್ಷೇತ್ರದಲ್ಲಿ ಮಾತ್ರ ಕಾಲಿಡಲೂ ಬಿಡುತ್ತಿಲ್ಲ. ಬಬಲೇಶ್ವರದಲ್ಲಿ ಕಾಲಿಟ್ಟರೆ ಕೂಡಲೇ ಯಾರದೋ ಪ್ರಚಾರಕ್ಕೆ ಬಂದಂತೆ ಪತ್ರಿಕಾ ಹೇಳಿಕೆ ನೀಡುತ್ತಾರೆ ಎಂದು ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದರು.