ಬೆಂಗಳೂರು: ನಮಗೆ ಬರಬೇಕಿದ್ದ ಬಾಕಿ ಬಿಲ್ ಪಾವತಿ ಮಾಡದೆ ನಿತ್ಯ ಕಿರುಕುಳ ನೀಡಲಾಗುತ್ತಿದೆ. ಇದರಿಂದ ಕಿಯೋನಿಕ್ಸ್ ವೆಂಡರ್ದಾರರ ಕುಟುಂಬ ಸರ್ವನಾಶವಾಗುತ್ತಿದೆ. ನಮಗೆ ದಯಾಮರಣ ನೀಡಿ ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.
ಕಿರುಕುಳದಿಂದ ಬೇಸತ್ತು ವೆಂಡರ್ಗಳು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಶರತ್ ಬಚ್ಚೇಗೌಡ ಕಾರಣ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ನಿತ್ಯ ಕಿರುಕುಳ ನೀಡಿ, ಕಿಯೋನಿಕ್ಸ್ ವಂಡೇರ್ದಾರರ ಬದುಕು ಕಿತ್ತುಕೊಂಡಿದ್ದಾರೆ. 450 ರಿಂದ 500 ಜನ ವೆಂಡರ್ದಾರರ ಜೊತೆಗೆ ನಮ್ಮಲ್ಲಿ ಕೆಲಸ ಮಾಡುವ 6 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸರ್ವಾನಾಶ ಮಾಡಿರುವ ಕಾರಣ ನಾವು ಬೇಸತ್ತಿದ್ದೇವೆ. ಹೀಗಾಗಿ, ನಮ್ಮೆಲ್ಲರಿಗೂ ಒಂದೇ ಬಾರಿಗೆ ಸಾಯಲು ದಯಾಮರಣ ನೀಡಿ ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ಬಗೇರ ಹಾಗೂ ಸದಸ್ಯರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಸುಮಾರು 48 ವರ್ಷಗಳಿಂದ ಕಿಯೋನಿಕ್ಸ್ ಕಾರ್ಯನಿರ್ವಹಿಸುತ್ತಿದೆ. 450 ರಿಂದ 500ಕ್ಕೂ ಹೆಚ್ಚು ಸಣ್ಣ ಉದ್ಯಮಿದಾರರನ್ನು ನಿಗಮದಲ್ಲಿ ವೆಂಡರ್ದಾರರನ್ನಾಗಿ ನೋಂದಾಯಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ದಶಕಗಳ ಕಾಲದಿಂದಲೂ, ಕಿಯೋನಿಕ್ಸ್ ಸಂಸ್ಥೆಯು ವಂಡರ್ದಾರರ ಜೊತೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿದೆ. ಆದರೆ ದಿಢೀರನೆ 2023ರಲ್ಲಿ ಸರ್ಕಾರ ಬದಲಾದ ತಕ್ಷಣ ವಂಡೆರ್ದಾರರ ಬಿಲ್ಲನ್ನು ತಡೆ ಹಿಡಿದು ನಾನಾ ರೀತಿಯಾಗಿ ಕಿರುಕುಳ ಕೊಡಲು ಪ್ರಾರಂಭಿಸಲಾಗಿದೆ.
3 ರಿಂದ 4 ತಿಂಗಳುಗಳ ಕಾಲ ಅಧಿಕಾರಗಳು ಹಾಗೂ ಸಚಿವರಲ್ಲಿ ನಾವು ಸಂಯಮದಿಂದ ಎಷ್ಟೇ ಕೇಳಿಕೊಂಡರು. ಮನವಿ ಮಾಡಿಕೊಂಡರೂ ಬಿಲ್ ಪಾವತಿ ಮಾಡಿಲ್ಲ. ಈ ಹಿಂದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತಿದ್ದ ಸಂಗಪ್ಪರವರು ಕಮಿಷನ್ ರೂಪದಲ್ಲಿ ಶೇ 12 ರಷ್ಟು ಲಂಚ ಕೇಳಿ ಕಿರುಕುಳ ಕೊಟ್ಟು, ನಾವು ಲಂಚ ಕೊಡಲು ಒಪ್ಪದೇ ಇದ್ದಾಗ ನಮ್ಮ ಬಿಲ್ ಪಾವತಿ ಮಾಡದೆ ತಡೆಹಿಡಿದಿದ್ದರು. ನಾವುಗಳು ನಮ್ಮ ಅಸೋಸಿಯೇಷನ್ ಕಡೆಯಿಂದ ಅಸೋಸಿಯೇಷನ್ ಅಧ್ಯಕ್ಷ ವಸಂತ ಕ ಬಂಗೇರ ಹತ್ತಿರ ಎಲ್ಲರೂ ಚರ್ಚಿಸಿ ಆ ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರತಿಭಟನೆ ಮಾಡಿದೆವು. ಆದರೂ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲಎಂದು ದೂರಿದ್ದಾರೆ.
ನಾವು ಪ್ರತಿಭಟನೆ ಮಾಡಿದ್ದರಿಂದ ಪ್ರಿಯಾಂಕ್ ಖರ್ಗೆ ಕೋಪಗೊಂಡು ಮತ್ತು ಅಧಿಕಾರಿಗಳು ಸೇರಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ವೈಯಕ್ತಿಕ ದ್ವೇಷ ಸಾಧಿಸಲು ಆರಂಭಿಸಿದ್ದಾರೆ. ಒಂದೂವರೆ ವರ್ಷ ಕಳೆದರೂ ತನಿಖೆಯ ಹೆಸರಲ್ಲಿ ನಮ್ಮ ಹಣ ಬಾಕಿ ಉಳಿಸಿಕೊಂಡು, ಪ್ರತಿದಿನ ಒಂದಲ್ಲಾ ಒಂದು ಕಾರಣ ಹೇಳುತ್ತಾ ನಾಳೆ, ನಾಡಿದ್ದು ನಿಮ್ಮ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾ ಒಂದೂವರೆ ವರ್ಷ ಕಳೆದರು ನಮ್ಮ ಬಿಲ್ ಪಾವತಿ ಮಾಡದೆ. ನಮ್ಮ ಬದುಕನ್ನೇ ಸರ್ವನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲಸವೂ ಇಲ್ಲದೆ, ನಾವು ಸಾಲ ಮಾಡಿ ಕೆಲಸಕ್ಕೆ ಹಾಕಿರುವ ನಮ್ಮ ಹಣ ನಮಗೆ ಕೊಡದೆ ನಮ್ಮೆಲ್ಲರ ಬದುಕನ್ನೇ ಕಿತ್ತುಕೊಂಡು ನಾವೆಲ್ಲರೂ ನರಕ ಅನುಭವಿಸುವಹಾಗೆ ನರಕ ತೋರಿಸುತ್ತಿದ್ದಾರೆ. ಇವರ ಹಿಂಸೆಯಿಂದ ನಮ್ಮ ವಂಡರ್ಗಳು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತಾಡುತ್ತಿದ್ದಾರೆ. ನಮ್ಮೆಲ್ಲರ ಪಾಲಿಗೆ ಉಳಿದಿರುವುದು ಇನ್ನು ಸಾಯುವ ಮಾರ್ಗ ಒಂದೇ ಎಂದಿದ್ದಾರೆ.