Select Your Language

Notifications

webdunia
webdunia
webdunia
webdunia

ಭಾಸ್ಕರ್ ರಾವ್‌ಗೆ ಮರ್ಯಾದೆ ಇದ್ರೆ ರಾಜೀನಾಮೆ ನೀಡಲಿ: ನಾರಾಯಣ ಗೌಡ

ಭಾಸ್ಕರ್ ರಾವ್‌ಗೆ ಮರ್ಯಾದೆ ಇದ್ರೆ ರಾಜೀನಾಮೆ ನೀಡಲಿ: ನಾರಾಯಣ ಗೌಡ
ಬೆಂಗಳೂರು , ಸೋಮವಾರ, 27 ಜುಲೈ 2015 (13:33 IST)
ರಾಜ್ಯದ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್‌ನನ್ನು ಎಸ್ಐಟಿ ಅಧಿಕಾರಿಗಳು ಇಂದು ಬಂಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಪ್ರತಿಕ್ರಿಯಿಸಿದ್ದು, ಭಾಸ್ಕರ್ ರಾವ್ ಅವರಿಗೆ ಮಾನ ಮರ್ಯಾದೆ ಇದ್ದರೆ ತಮ್ಮ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಎಂದು ಆಗ್ರಹಿಸಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಲಿಂದ ತಮ್ಮ ತಂದೆ ಲೋಕಾಯುಕ್ತ ಪದವಿಯಲ್ಲಿದ್ದಾರೆ ಎಂಬುದನ್ನೇ ದುರುಪಯೋಗಪಡಿಸಿಕೊಂಡು ಸಾಕಷ್ಟು ಮಂದಿ ಅಧಿಕಾರಿಗಳಿಂದ ಅಶ್ವಿನ್ ರಾವ್ ಅವರು ನೂರಾರು ಕೋಟಿ ವಸೂಲಿ ಮಾಡಿರುವುದು ಈಗಾಗಲೇ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರಿಗೆ ಮಾನ ಮರ್ಯಾದೆ ಇದ್ದರೆ ಅವರು ತಾವೇ ಖುದ್ದು ರಾಜೀನಾಮೆ ನೀಡಲಿ ಎಂದು ಆಕ್ರೋಶದಿಂದ ನುಡಿದರು. 
 
ಇದೇ ವೇಳೆ, ತಮ್ಮ ಪುತ್ರ ತಮ್ಮ ಮುಂದೆಯೇ ಅವ್ಯವಹಾರ ನಡೆಸುತ್ತಿದ್ದಾನೆ ಎಂಬ ಅರಿವು ಅವರಿಗೆ ಇದ್ದರೂ ಕೂಡ ಭಾಸ್ಕರ್ ರಾವ್ ಸೂಕ್ತ ಕ್ರಮ ಕೈಗೊಂಡಿಲ್ಲ. ಅಲ್ಲದೆ ರಾಜ್ಯಾದ್ಯಂತ ಹೋರಾಟಗಳು ನಡೆದರೂ ಕೂಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಇದರಿಂದ ರಾಜ್ಯದ ಜನತೆ ಪ್ರಸ್ತುತ ತಲೆ ತಗ್ಗಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದ ಅವರು, ನಮ್ಮ ರಾಜ್ಯ ಲೋಕಾಯುಕ್ತ ಸಂಸ್ಥೆ ವಿಚಾರದಲ್ಲಿ ಇಡೀ ರಾಷ್ಟ್ರಕ್ಕೆ ಮಾದರಿ ಹಾಗೂ ಆದರ್ಶವಾಗಿತ್ತು. ಆದರೆ ಭಾಸ್ಕರ್ ರಾವ್ ಅವರು ನೇಮಕವಾದ ಬಳಿಕ ಸಂಸ್ಥೆಯ ಎಲ್ಲಾ ಘನತೆ ಮಣ್ಣುಪಾಲಾಗಿದೆ. ಅಂತಹ ಕಳಂಕವನ್ನು ಅವರು ಸಂಸ್ಥೆಗೆ ತಂದಿದ್ದಾರೆ ಎಂದು ಆಱೋಪಿಸಿದರು. 
 
ಬಳಿಕ, ಇಷ್ಟಾದರೂ ಕೂಡ ಭಾಸ್ಕರ್ ರಾವ್ ಅವರು ಬಂಡ ಹಾಗೂ ಮೊಂಡು ತನವನ್ನು ತೋರುತ್ತಿದ್ದಾರೆ. ಆದರೆ ಪ್ರಸ್ತುತ ಅವರು ಅಧಿಕಾರದಲ್ಲಿ ಮುಂದುವರಿಯುವ ಹಕ್ಕು ಅಥವಾ ನೈತಿಕತೆ ಹೊಂದಿಲ್ಲ. ಅಲ್ಲದೆ ಪ್ರಕರಣದಲ್ಲಿ ಭಾಸ್ಕರ್ ರಾವ್ ಅವರದ್ದೂ ಪಾಲಿದ್ದು, ಅವರನ್ನೂ ಬಂಧಿಸಬೇಕು. ಆಗ ಮಾತ್ರ ಎಸ್ಐಟಿ ಮೇಲೆ ನಂಬಿಕೆ ಬರಲಿದೆ ಎಂದರು. 

Share this Story:

Follow Webdunia kannada