Select Your Language

Notifications

webdunia
webdunia
webdunia
webdunia

ಲೋಕಾಗೆ ತಿದ್ದುಪಡಿ ತಂದಲ್ಲಿ ರಾಜ್ಯ ಬಿಹಾರವಾಗಲಿದೆ: ಹೆಚ್‌ಡಿಕೆ

ಲೋಕಾಗೆ ತಿದ್ದುಪಡಿ ತಂದಲ್ಲಿ ರಾಜ್ಯ ಬಿಹಾರವಾಗಲಿದೆ: ಹೆಚ್‌ಡಿಕೆ
ಬೆಂಗಳೂರು , ಗುರುವಾರ, 23 ಜುಲೈ 2015 (16:16 IST)
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 42 ನಿಮಿಷಗಳ ಆಡಿಯೋ ಕ್ಲಿಪ್ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಪ್ರಕರಣದ ಎಲ್ಲಾ ಆರೋಪಿಗಳನ್ನು ರಕ್ಷಿಸುವ ಕಾರ್ಯದಲ್ಲಿ ಸರ್ಕಾರವೇ ಮುಂದಾಗಿದ್ದು, ನೆಪಮಾತ್ರಕ್ಕೆ ಎಸ್ಐಟಿ ತಂಡವನ್ನು ರಚಿಸಿದೆ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿ ಪ್ರತಿಕ್ರಿಯಿಸಿರುವ ವ್ಯಕ್ತಿ ಭಾಸ್ಕರ್ ಹೇಳುವ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರ ಜೊತೆಯಲ್ಲಿಯೇ ನಾನೂ ಹಾಗೂ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಸೇರಿದಂತೆ ಇತರೆ ನಾಲ್ವರು ಜೆಟ್ ಏರ್‌ವೇಸ್‌ನಲ್ಲಿ ಪ್ರಯಾಣಿಸಿದ್ದೆವು ಎಂದು ಹೇಳಿದ್ದಾನೆ. ಇದನ್ನು ಗಮನಿಸಿದಲ್ಲಿ ಮುಖ್ಯಮಂತ್ರಿಗಳೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಸ್ಐಟಿಯನ್ನು ನೇಮಿಸಿದ್ದಾರೆ. ಅಲ್ಲದೆ ಲೋಕಾಯುಕ್ತ ಕಾಯಿದೆಯನ್ನು ತಿದ್ದುಪಡಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. 
 
ಇದೇ ವೇಳೆ, ಸರ್ಕಾರ 1984ರಲ್ಲಿ ಲೋಕಾಯುಕ್ತ ಕಾಯಿದೆಯನ್ನು ಜಾರಿಗೊಳಿಸಿತ್ತು. ಅದು ತುಂಬಾ ಕಠಿಣ ಹಾಗೂ ಭ್ರಷ್ಟರನ್ನು ಸದೆ ಬಡಿಯಲು ಸೂಕ್ತವಾಗಿತ್ತು. ಆದರೆ ಅದಕ್ಕೆ ತಿದ್ದುಪಡಿ ತರಲು ಹೊರಟಿರುವ ಇಂದಿನ ಸರ್ಕಾರ ಮುಖ್ಯಮಂತ್ರಿಯಾದವರು ಎಷ್ಟೇ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಕೂಡ ಸೂಕ್ತ ರಕ್ಷಣೆಯೊಂದಿಗೆ ತಪ್ಪಿಸಿಕೊಳ್ಳುವಂತೆ ಕಾನೂನು ರೂಪಿಸುತ್ತಿದ್ದಾರೆ. ಸದನದ ಸದಸ್ಯರಿಂದ ಒಪ್ಪಿಗೆ ಪಡೆದು ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ಸಾಧ್ಯವೇ ಎಂದ ಅವರು, ನಮ್ಮ ರಾಜ್ಯ ಈ ಹಿಂದೆ ಸಂಪಾದಿಸಿದ್ದ ಎಲ್ಲಾ ಗೌರವ ಹಾಗೂ ಘನತೆಯನ್ನು ಈ ಸರ್ಕಾರ ಹಾಳುಗೆಡವುತ್ತಿದೆ. ಪರಿಣಾಮ ಸರ್ಕಾರ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದಲ್ಲಿ ರಾಜ್ಯವು ಬಿಹಾರ ರಾಜ್ಯದಂತೆ ಗೂಂಡಾಗಳ ರಾಜ್ಯವಾಗಲಿದ್ದು, ಯಾರು ಎಷ್ಟು ಮಟ್ಟದ ಭ್ರಷ್ಟಾಚಾರವನ್ನಾದರೂ ಮಾಡಬಹುದಾಗಿದೆ ಎಂದರು. 
 
ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ನೆಪಮಾತ್ರಕ್ಕೆ ಎಸ್ಐಟಿಯನ್ನು ನೇಮಿಸಿದ್ದು, ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ ರಚಿಸಿದ್ದಾರೆ. ಆದ್ದರಿಂದಲೇ ಇದುವರೆಗೂ ಕೂಡ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ. ಅಲ್ಲದೆ ಪ್ರಸ್ತುತ ಬಂಧಿತರಾಗಿರುವ ಮೂವರು ಆರೋಪಿಗಳು ತಿಮಿಂಗಿಲಗಳಲ್ಲ ಕೇವಲ ಮೀನುಗಳಷ್ಟೇ ಎಂದ ಅವರು, ದೂರುದಾರ ಕೃಷ್ಣಮೂರ್ತಿ ಕೂಡ ಉಲ್ಟಾ ಹೊಡೆದಿದ್ದು, ಎಸ್ಪಿ ಸೋನಿಯಾ ನಾರಂಗ್ ಅವರ ಬಳಿ ತನಿಖೆ ವೇಳೆ ಮೇ 4ರಂದು ನನ್ನನ್ನು ಭೇಟಿ ಮಾಡಿದ್ದ ಅಶ್ವಿನ್ ರಾವ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಿಕೆ ನೀಡಿದ್ದರು. ಆದರೆ ಎಸ್ಐಟಿ ಬಳಿ ನೀಡಿರುವ ಹೇಳಿಕೆಯಲ್ಲಿ ಮೇ 5ರಂದು ಎಂದು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಸಂಪೂರ್ಣವಾಗಿ ದಾರಿ ತಪ್ಪಿದೆ ಎಂಬ ಅರಿವು, ಅನುಮಾನ ಎಲ್ಲರಲ್ಲೂ ಮೂಡುತ್ತದೆ ಎಂದರು. 

Share this Story:

Follow Webdunia kannada