ಬೆಂಗಳೂರು: ಅಕ್ರಮ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ಸಚಿವರು ಇದ್ದಾರೆಂಬ ಚರ್ಚೆ ಇದೆ. ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿ, ಈ ಪ್ರಕರಣದಲ್ಲಿರುವ ರಾಜಕೀಯ ನಾಯಕರ ಹೆಸರನ್ನು ಶೀಘ್ರದಲ್ಲೇ ಬಾಯಿಬಿಡುವುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ರನ್ಯಾ ರಾವ್ ಕೇಸ್‌ನಲ್ಲಿ ಯಾರು ತಪ್ಪು ಮಾಡಿದ್ದರೂ ತಪ್ಪೇ. ಇಲ್ಲಿ ಕಸ್ಟಮ್ಸ್ ಆಧಿಕಾರಿಗಳು ತಪ್ಪು ಮಾಡಿದ್ದರೆ ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ಕೂಡ ತಪ್ಪು ಎಂದು ಯತ್ನಾಳ್ ಹೇಳಿದ್ದಾರೆ.
ಸೋಮವಾರ ನಡೆಯುವ ಸದನದಲ್ಲಿ ಈ ವಿಚಾರವಾಗಿ ಸುದೀರ್ಘವಾಗಿ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ರನ್ಯಾ ರಾವ್ ಜೊತೆ ಯಾವ ಸಚಿವರು ಸಂಪರ್ಕದಲ್ಲಿದ್ದರು ಎಂಬುದು ಗೊತ್ತಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ನಾನು ಮಾತನಾಡುವುದಿಲ್ಲ. ಆದರೆ, ಸದನದಲ್ಲೇ ಈ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಯತ್ನಾಳ್ ಹೇಳಿರುವುದು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ರನ್ಯಾ ರಾವ್ ಜೊತೆಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರು ನಮಗೆ ಗೊತ್ತಿದೆ. ಆ ಹೆಸರುಗಳನ್ನು ಸದನದಲ್ಲೇ ಹೇಳುವೆ.