ದಕ್ಷ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು ಡಿವೈಎಸ್‌ಪಿ ಅನುಪಮಾ ಫೇಸ್ಬುಕ್‌ನಲ್ಲಿ ಏನು ಬರೆದುಕೊಂಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. 'ಸಿದ್ದರಾಮಯ್ಯನವರ್ ರಮ್ ರಾಜ್ಯ' ಎಂಬ ಪೋಸ್ಟ್ ಹಂಚಿಕೊಂಡಿರುವುದು ನನಗೆ ಗೊತ್ತಿಲ್ಲ .ಅದನ್ನು ನಾನು ನೋಡಿಲ್ಲ. ಹೀಗಾಗಿ ಅದಕ್ಕೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ದಕ್ಷ, ಪ್ರಾಮಾಣಿಕ, ಕೆಚ್ಚೆದೆಯ ಅಧಿಕಾರಿ ಎಂದೇ ಖ್ಯಾತಿಯಾಗಿರುವ ಅನುಪಮಾ ಶೆಣೈ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಆದರೆ, ಅವರ ರಾಜೀನಾಮೆಗೆ ಸ್ಪಷ್ಟ ಕಾರಣವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಇವುಗಳ ನಡುವೆಯೇ ಅವರದೆನ್ನಲಾದ ಫೇಸ್‌ಬುಕ್ ಖಾತೆಯಲ್ಲಿ `ಲಿಕ್ಕರ್ ಲಾಬಿಗೆ ಕೂಡ್ಲಗಿ ಜನತೆ ಶರಣು ಶರಣು ಎನ್ನಿರೇ' ಎನ್ನುವ ಸ್ಟೇಟಸ್ ಹರಿದಾಡುತ್ತಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ, `ಸಿದ್ದರಾಮಯ್ಯರ 'ರಮ್' ರಾಜ್ಯ- ಎಂದು ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟನ್ನು, ಅನುಪಮಾ ಅವರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಜೊತೆಗೆ, ಭಾನುವಾರ 1.20ಕ್ಕೆ ಅನುಪಮಾ ಅವರು ತಮ್ಮ ಪ್ರೊಫೈಲ್ ಫೋಟೋ ಬದಲಿಸಿ, ಕ್ರಾಂತಿಕಾರಿ ಸಂದೇಶ(ಅನ್ಯಾಯ ಅನ್ನೋದು ಕಾನೂನಾದಾಗ ಬಂಡಾಯ ಅನ್ನೋದು ಕರ್ತವ್ಯವಾಗುತ್ತದೆ )ವಿರುವ ಸ್ಲೋಗನ್ ಹಾಕಿದ್ದಾರೆ. ಕ್ಷಣಕ್ಷಣಕ್ಕೂ ಅವರ ರಾಜೀನಾಮೆ ಪ್ರಕರಣ ಹೊಸತೊಂದು ಕುತೂಹಲಕ್ಕೆ ಎಡೆಮಾಡಿಕೊಡುತ್ತಿದೆ. ಆದರೆ ಅನುಪಮಾ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾತ್ರ ಯಾರಿಗೂ ತಿಳಿದಿಲ್ಲ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.