ಬೆಂಗಳೂರು: ಕೇರಳ, ತಮಿಳುನಾಡು ಹಾಗೂ ಕರ್ನಾಟಕಕ್ಕೆ ಬೇಕಾಗಿದ್ದ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಸಂಬಂಧ ಗೃಹ ಸಚಿವ ಪರಮೇಶ್ವರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಅನೇಕ ಪ್ರಕರಣಗಳಲ್ಲಿ ಕಳೆದ 20 ವರ್ಷಗಳಿಂದ ನಕ್ಸಲ್ ನಾಯಕ ವಿಕ್ರಂ ಗೌಡ ತಲೆಮರೆಸಿಕೊಂಡಿದ್ದ. ಆತನನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ. ಆತನ ಚಲನವಲನಗಳ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದರು. ಕಳೆದ ವಾರ ಲತಾ ಮತ್ತು ರಾಜು ಎಂಬ ಇಬ್ಬರು ನಕ್ಸಲರ ಸುಳಿವು ಸಿಕ್ಕಿದ್ದು, ಈ ವೇಳೆ ವಿಕ್ರಮ್ ಗೌಡ ಇರುವ ಮಾಹಿತಿ ಪೊಲೀಸರಿಗೆ ಲಭಿಸಿದೆ ಎಂದರು.
ಮಾಹಿತಿ ಆಧರಿಸಿ ಹೆಬ್ರಿಯಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ನಕ್ಸಲರ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿತು. ನಕ್ಸಲ್ ಹಾಗೂ ಪೊಲೀಸರ ನಡುವಿನ ಗುಂಡಿನ ದಾಳಿಯಲ್ಲಿ ವಿಕ್ರಂ ಗೌಡ ಹತ್ಯೆಯಾಗಿದ್ದಾನೆಂದು ಸ್ಪಷ್ಟಪಡಿಸಿದರು.
ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ ಹತನಾಗಿದ್ದಾನೆ.