Select Your Language

Notifications

webdunia
webdunia
webdunia
webdunia

ಹಿಟ್ ಅಂಡ್ ರನ್ ಪ್ರಕರಣ: ಸಲ್ಮಾನ್ ಖಾನ್ ಮುಂದಿನ ನಡೆ ಏನು ?

ಹಿಟ್ ಅಂಡ್ ರನ್ ಪ್ರಕರಣ: ಸಲ್ಮಾನ್ ಖಾನ್ ಮುಂದಿನ ನಡೆ ಏನು ?
ಮುಂಬೈ, , ಬುಧವಾರ, 6 ಮೇ 2015 (15:07 IST)
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ನ್ಯಾಯಾಲಯದ ಆದೇಶ ಪ್ರತಿ ಸಿಕ್ಕ ಬಳಿಕ ಪೊಲೀಸರು ಜೈಲಿಗೆ ಕರೆದೊಯ್ಯಲಿದ್ದಾರೆ.
 
ಪ್ರಸ್ತುತ ಮುಂಬೈನ ಸೆಷನ್ಸ್ ನ್ಯಾಯಾಲಯ ನಟ ಸಲ್ಮಾನ್ ಖಾನ್ ಪರ ವಕೀಲರಿಗೆ ಆದೇಶ ಪ್ರತಿ ರವಾನಿಸಿದ್ದು, ವಕೀಲರು ಇಂದೇ ಹೈಕೋರ್ಟ್ ನಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಪ್ರತಿ ಸಿಕ್ಕ ಬಳಿಕ ಅಪರಾಧಿ ಸಲ್ಮಾನ್, ನಗರದ ಅರ್ಥರ್ ರೋಡ್‌ನಲ್ಲಿರುವ ಜೈಲಿಗೆ ನಡೆಯಲಿದ್ದಾರೆ. 
 
ಜೈಲು ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಸಲ್ಮಾನ್ ಅವರ ಪರ ವಕೀಲ ಶ್ರೀಕಾಂತ್ ಶಿವುಡೆ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಇಂದೇ ಮೇಲ್ಮನವಿ ಸಲ್ಲಿಸಲು ಅರ್ಜಿಯನ್ನು ಸಿದ್ಧಪಡಿಸಿದ್ದು, ಹೈಕೋರ್ಟ್‌ನ ರಜೆ ಕಾಲದ ಪೀಠಕ್ಕೆ ಇಂದೇ ತುರ್ತಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಇದರ ಜೊತೆಗೆ ಜಾಮೀನು ಕೋರಿ ಕೂಡ ಅರ್ಜಿ ಸಲ್ಲಿಸಲಾಗುತ್ತದೆ ಎನ್ನಲಾಗಿದೆ. 
 
ತುರ್ತು ಅರ್ಜಿ ಸಲ್ಲಿಸಲು ಕಾರಣವೇನು?
ಮೇ 15ರಿಂದ ಜೂನ್ 7ರ ವರೆಗೆ ನ್ಯಾಯಾಲಯಕ್ಕೆ ಕಡ್ಡಾಯ ರಜೆ ಇರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆದ್ದರಿಂದ ನಾಳೆಯೇ ಅರ್ಜಿ ಸಲ್ಲಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ವಕೀಲರು ಕೈಗೊಂಡಿದ್ದಾರೆ. ತುರ್ತಾದ ಸಂದರ್ಭಗಳಲ್ಲಿ ನ್ಯಾಯಾಲಯದ ರಜಾ ಕಾಲಾವಧಿಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ.  
 
ಪ್ರಕರಣ ಸಂಬಂಧ ಇಂದು ಮಧ್ಯಾಹ್ನ ಶಿಕ್ಷೆ ಪ್ರಕಟಗೊಂಡಿದ್ದು, ಈ ವೇಳೆ, ಶಿಕ್ಷೆಯ ಪ್ರಮಾಣವನ್ನು ಆಲಿಸಿದ ಅಪರಾಧಿ ಸಲ್ಲು, ನ್ಯಾಯಾಲಯದ ಕಟಕಟೆಯಲ್ಲಿಯೇ ಕಣ್ಣೀರಿಟ್ಟಿದ್ದಾರೆ.  
 
ಶಿಕ್ಷೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿನ ನಿವಾಸಕ್ಕೆ ಬಾಲಿವುಡ್ ನಟಿಯರಾದ ಸೋನಾಕ್ಷಿ ಸಿನ್ಹಾ ಹಾಗೂ ಪ್ರೀತಿ ಝಿಂಟಾ ಅವರು ಭೇಟಿ ನೀಡಿದ್ದು, ಅವರ ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.  
 
ಪ್ರಕರಣದ ಹಿನ್ನೆಲೆ: ಕುಡಿದು ಇಲ್ಲಿನ ಬಾಂದ್ರಾ ಪ್ರದೇಶದಲ್ಲಿ ಚಾಲನೆ ಮಾಡುತ್ತಿದ್ದಾಗ ಸಲ್ಮಾನ್ ಅವರ ಕಾರು ಕಾಲು ದಾರಿಯಲ್ಲಿ ಮಲಗಿದ್ದ ಪಾದಚಾರಿಗಳ ಮೇಲೆ ಹತ್ತಿತ್ತು. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದರು. ಈ ಘಟನೆಯು ಕಳೆದ 2002ರ ಸೆ. 27 ಮತ್ತು 28ರ ಮಧ್ಯರಾತ್ರಿಯಲ್ಲಿ ನಡೆದಿತ್ತು. ಆದ್ದರಿಂದ ಭಾರತೀಯ ದಂಡ ಸಂಹಿತೆ 304/2ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಪ್ರಕರಣವನ್ನು ಉದ್ದೇಶ ರಹಿತ ಮಾನವ ಹತ್ಯೆ ಎಂದು ಪರಿಗಣಿಸಿ ಇಂದು ಶಿಕ್ಷೆ ಪ್ರಕಟಿಸಿದೆ. ನ್ಯಾಯಾಲಯವು ಈ ಪ್ರಕರಣವನ್ನು ಹನ್ನೆರಡೂವರೆ ವರ್ಷಗಳ ಕಾಲ ಸುಧೀರ್ಘವಾಗಿ ವಿಚಾರಣೆ ನಡೆಸಿತ್ತು. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಮೇಲಿದ್ದ ಆರೋಪಗಳೇನು?
-ಉದ್ದೇಶ ರಹಿತ ಮಾನವ ಹತ್ಯೆ ಆರೋಪ 
-ನಿರ್ಲಕ್ಷ್ಯ ಚಾಲನೆಯಿಂದ ವ್ಯಕ್ತಿ ಸಾವಿನ ಆರೋಪ
-ಅಸುರಕ್ಷಿತ ಚಾಲನೆಯಿಂದ ಸಾರ್ವಜನಿಕರನ್ನು ಗಾಯಗೊಳಿಸಿದ ಆರೋಪ 
-ಅಸುರಕ್ಷಿತ ಚಾಲನೆಯಿಂದ ಸ್ವತ್ತುಗಳಿಗೆ ಹಾನಿ ಮಾಡಿದ ಆರೋಪ
-ಪರವಾನಿಗೆ ಇಲ್ಲದೆ ಕಾರು ಚಾಲನೆ ಮಾಡಿದ ಆರೋಪ
-ಕುಡಿದು ಕಾರು ಚಾಲನೆ ಮಾಡಿದ ಆರೋಪ

Share this Story:

Follow Webdunia kannada