Select Your Language

Notifications

webdunia
webdunia
webdunia
webdunia

ಐಸಿಸ್ ಉಗ್ರರಿಂದ ಕನ್ನಡಿಗರ ಕಿಡ್ನಾಪ್: ಕುಟುಂಬಸ್ಥರಲ್ಲಿ ತೀವ್ರ ಆತಂಕ

ಐಸಿಸ್ ಉಗ್ರರಿಂದ ಕನ್ನಡಿಗರ ಕಿಡ್ನಾಪ್: ಕುಟುಂಬಸ್ಥರಲ್ಲಿ ತೀವ್ರ ಆತಂಕ
ಕೋಲಾರ , ಶುಕ್ರವಾರ, 31 ಜುಲೈ 2015 (16:52 IST)
ತಮ್ಮ ಮಕ್ಕಳನ್ನು ಐಸಿಸ್ ಉಗ್ರರು ಅಪಹರಿಸಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅಪಹರಣಕ್ಕೊಳಗಾದವರ ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ. 
 
ಜುಲೈ 27ರಂದು ತಾಯ್ನಾಡಿಗೆ ವಾಪಸಾಗುತ್ತಿದ್ದ ವೇಳೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ. 
 
ಇನ್ನು ದೇಶದ ನಾಲ್ವರು ಪ್ರಜೆಗಳು ಲಿಬಿಯಾದ ಟ್ರಿಪೊಲಿಯಲ್ಲಿ ವಿಮಾನ ಏರುತ್ತಿದ್ದ ವೇಳೆಯಲ್ಲಿ ಅಪಹರಿಸಲಾಗಿದ್ದು, ಹಿಂದೂ ಎಂಬ ಕಾರಣಕ್ಕೆ ಅಪಹರಣಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ. 
 
ಅಪಹರಣಕ್ಕೊಳಗಾದವರಲ್ಲಿ ಇಬ್ಬರು ಕನ್ನಡಿಗರಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಲು ಮತ್ತು ರತ್ನಮ್ಮ ದಂಪತಿಯ ಪುತ್ರ ವಿಜಯ್ ಕುಮಾರ್(56) ಎಂದು ತಿಳಿದು ಬಂದಿದ್ದು, ಜಿಲ್ಲೆಯ ಬಂಗಾರಪೇಟೆ ನಗರದ ವಿವೇಕಾನಂದನಗರ ನಿವಾಸಿ ಎಂದು ಹೇಳಲಾಗಿದೆ. ಇವರು ಕಳೆದ 10 ವರ್ಷಗಳಿಂದಲೂ ಕೂಡ ಇಲ್ಲಿನ ಲಿಬಿಯಾ ವಿಶ್ವ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ತಾಯ್ನಾಡಿಗೆ ವಾಪಾಸಾಗುತ್ತಿದ್ದ ವೇಳೆ ಉಗ್ರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. 
 
ಇನ್ನು ವಿಜಯ್ ಕುಮಾರ್ ಅವರ ತಂದೆ ಈಗಾಗಲೇ ಕೋಲಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಮಗನನ್ನು ಜೀವಂತವಾಗಿ ಕರೆತರಲು ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ ವಿಜಯ್ ಕುಮಾರ್ ಸಹೋದರ ಪ್ರತಿಕ್ರಿಯಿಸಿದ್ದು, ನಮಗೆ ವಿದೇಶಾಂಗ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿ ನೋಡಿ ತಿಳಿದೆವು ಎಂದಿದ್ದಾರೆ. 
 
ಇನ್ನು ರಾಜ್ಯದ ಮತ್ತೋರ್ವ ಪ್ರಜೆ ರಾಯಚೂರು ಮೂಲದ ಲಕ್ಷ್ಮಿಕಾಂತ್ ಎನ್ನಲಾಗಿದ್ದು, ಇವರು ನಗರದ ರಾಮಕೃಷ್ಣ ಎಂಬುವವರ ಪುತ್ರರಾಗಿದ್ದಾರೆ. ಪ್ರಸ್ತುತ ಇವರ ಮನೆಯಲ್ಲಿಯೂ ಕೂಡ ಆಂತಕ ಮನೆ ಮಾಡಿದ್ದು, ತಮ್ಮ ಮಗನನ್ನು ಜೀವಂತವಾಗಿ ಕರೆತರಲು ಕೇಂದ್ರದ ಗೃಹ ಇಲಾಖೆಗೆ ರಾಮಕೃಷ್ಣಪ್ಪ ಆಗ್ರಹಿಸಿದ್ದಾರೆ. 
 
ಇನ್ನು ಈ ಸಂಬಂಧ ಲಕ್ಷ್ಮಿಕಾಂತ್ ತಂದೆ ರಾಮಕೃಷ್ಣಪ್ಪ ಅವರು ಜಿಲ್ಲಾಧಿಕಾರಿ ಹಾಗೂ ಈಶಾನ್ಯ ಭಾಗದ ಡಿಜಿಪಿ ಅವರಿಗೆ ಮನವಿ ಸಲ್ಲಿಸಿದ್ದು, ಸುರಕ್ಷಿತವಾಗಿ ಕರೆತರಲು ಶೀಘ್ರ ಕ್ರಮ ಕೈಗೊಳ್ಳಿ ಎಂದು ಮನವಿ ಸಲ್ಲಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಶೀಘ್ರವೇ ಸಹಕರಿಸಲಿ ಎಂದು ಆಗ್ರಹಿಸಿದ್ದಾರೆ. ಲಕ್ಷ್ಮಿಕಾಂತ್ ಅವರಿಗೆ 6 ತಿಂಗಳ ಓರ್ವ ಮಗಳಿದ್ದು, ಹೆಂಡತಿ ಮತ್ತು ಮಗಳು ರಾಯಚೂರಿನಲ್ಲಿಯೇ ವಾಸಿಸುತ್ತಿದ್ದಾರೆ.  
 
ಇನ್ನು ಈ ಇಬ್ಬರ ಜೊತೆಗೆ ಬಲರಾಮ್ ಹಾಗೂ ಗೋಪಿಕೃಷ್ಣ ಎಂಬ ಆಂಧ್ರ ಮೂಲದ ಇಬ್ಬರು ವ್ಯಕ್ತಿಗಳನ್ನು ಅಪಹರಿಸಿದ್ದು ಒಟ್ಟು ನಾಲ್ಕ ಜನರನ್ನು ಐಸಿಸ್ ಉಗ್ರರು ಅಪಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada