ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ತಜ್ಞರು ನಿರ್ಧರಿಸಿದ್ದಾರೆ. ಆದರೆ 20 ಟನ್‌ಗಿಂತ ಹೆಚ್ಚಿನ ಪ್ರಮಾಣದ ಸರಕು ಸಾಗಣೆಯ ವಾಹನಗಳಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಮೇಲ್ಸೇತುವೆ ಪ್ರಾರಂಭವಾಗುವ ಗೊರಗುಂಟೆ ಪಾಳ್ಯ ಭಾಗದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ ಎಂಟನೇ ಮೈಲಿ ಸಮೀಪ ಕೆಲ ಕೇಬಲ್‌ಗಳು ಹಾನಿಗೊಳಗಾಗಿದ್ದರಿಂದ ಕಳೆದ ಆರು ತಿಂಗಳಿಂದ ಭಾರೀ ವಾಹನಗಳ ಸಂಚಾರವನ್ನು ಮೇಲ್ಸೇತುವೆ ಮೇಲೆ ನಿಷೇಧಿಸಲಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಲವು ಪರೀಕ್ಷೆ ನಡೆಸಿದ್ದರು. ಬಳಿಕ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೆಚ್ಚಿನ ಪರೀಕ್ಷೆ ನಡೆಸಿದ ಬಳಿಕವಷ್ಟೇ ಭಾರೀ ವಾಹನಗಳಿಗೆ ಪ್ರವೇಶ ಕಲ್ಪಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದರು.