ಬೆಂಗಳೂರು: ಬಿಸಿಲಿ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುವುದರೊಂದಿಗೆ ಅದರ ಬಿಸಿ ತರಕಾರಿ, ಮಾಂಸದ ದರದ ಮೇಲೂ ತಟ್ಟುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಬಳಕೆಯ ಎಲ್ಲ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ನಾಳೆ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇನ್ನೂ ಮುಸ್ಲಿಂ ಬಾಂಧವರಿಗೆ ಇದೀಗ ರಂಜಾನ್ ಸಮಯ. ಈ ವೇಳೆ ಮಾಂಸ, ಮೀನು ಹಾಗೂ ತರಕಾರಿ ಹೆಚ್ಚು ಮಾರಾಟವಾಗುತ್ತದೆ. ಆದರೆ ಈ ಬೆಲೆ ಏರಿಕೆ ಗ್ರಾಹಕನ ಜೇಬಿಗೆ ಕತ್ತರಿ ಹಾಕಿದೆ.
ಇದಕ್ಕೆಲ್ಲ ಕಾರಣ ಬಿಸಿಲ ತಾಪ ಎಂದು ಹೇಳಲಾಗುತ್ತಿದೆ. ರೈತರು ಈ ಉರಿ ಬಿಸಿಲಿಗೆ ಕೋಳಿಗಳು ಸಾಯುವ ಸಾಧ್ಯತೆಯಿರುವುದರಿಂದ ಕೋಳಿ ಉತ್ಪಾದನೆಯಲ್ಲಿ ಕುಂಠಿತ ಮಾಡಿದ್ದಾರೆ. ಹಬ್ಬವಾಗಿರುವುದರಿಂದ ಮಾಂಸದ ಮಾರಾಟ ಜಾಸ್ತಿಯಾಗುತ್ತಿದೆ. ಆದ್ದರಿಂದ ಉತ್ಪಾದನೆ ಕಡಿಮೆಯಾಗಿ ಮಾರಾಟ ಜಾಸ್ತಿಯಾಗಿರುವುದರಿಂದ ಏಕಾಏಕಿ ಕೋಳಿ ಕೆಜಿ 250 ರೂ ಇದ್ದದ್ದು 300 ಪಾಸಿನಲ್ಲಿದೆ.
ಇನ್ನೂ ಕೋಳಿಗಳು ಸಾಯುವ ಭೀತಿಯಿಂದ ಕೋಳಿ ಮಾರಾಟದ ಅಂಗಡಿಯವರು ಕೋಳಿಗಳನ್ನು ಅಂಗಡಿಗಳಲ್ಲಿ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಇದರ ಪೆಟ್ಟು ಗ್ರಾಹಕರಿಗೆ ತಾಗಿದೆ.
ಅದಲ್ಲದೆ ಇದೀಗ ಮಾರುಕಟ್ಟೆಗೆ ಹೆಚ್ಚಿನ ಮೀನುಗಳು ಬರುತ್ತಿಲ್ಲ. ಶೇಖರಣೆ ಮಾಡಿ ಇಟ್ಟುಕೊಂಡರೆ ಹಾಳಾಗುವುವ ಭಯದಲ್ಲಿ ಮಾರಾಟಗಾರರು ಹೆಚ್ಚಾಗಿ ಖರೀದಿಸುತ್ತಿಲ್ಲ. ಇನ್ನೂ ಬಿಸಿಲು ಹೆಚ್ಚಿರುವುದರಿಂದ ಸಂಜೆ ವೇಳೆಗೆ ಮೀನು ಹಾಳಾಗುತ್ತದೆ. ಆದ್ದರಿಂದ ಬಂಗುಡೆ ಮೀನು ಕೆಜಿ 200-250 ಇದ್ದದ್ದು 350ರ ಮಟ್ಟಿಗೆ ಏರಿಕೆಯಾಗಿದೆ.