ಮೈಸೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತದಾನ ಮುಗಿದ ಬಳಿಕವೂ ಶ್ರಮವಹಿಸುತ್ತಿದ್ದಾರೆ.
ಮಗನ ನಾಮಪತ್ರ ಸಲ್ಲಿಕೆ ಮೊದಲು ಎಚ್ ಡಿಕೆ ದಂಪತಿ ಸಮೇತ ದೇವರ ಮೊರೆ ಹೋಗಿದ್ದರು. ನಿಖಿಲ್ ಪರ ಮತಯಾಚನೆ ಆರಂಭಕ್ಕೂ ಮುನ್ನವೂ ಹಾಸನಾಂಬೆಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಮೊನ್ನೆ ಮತದಾನದ ದಿನ ನಿಖಿಲ್ ಕುಮಾರಸ್ವಾಮಿ ಆಂಜನೇಯನ ದರ್ಶನ ಪಡೆದಿದ್ದರು.
ಇಂದು ಎಚ್ ಡಿ ಕುಮಾರಸ್ವಾಮಿ ಪುತ್ರನ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಲು ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಂದಿದ್ದಾರೆ. ಇಂದು ಬೆಳಿಗ್ಗೆಯೇ ಚಾಮುಂಡಿ ಬೆಟ್ಟಕ್ಕೆ ಬಂದ ಕುಮಾರಸ್ವಾಮಿ ಮಗನ ಗೆಲುವಿಗಾಗಿ ಪ್ರಾರ್ಥಿಸಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದಾರೆ.
ನವಂಬರ್ 23 ಕ್ಕೆ ಉಪಚುನಾವಣೆ ಫಲಿತಾಂಶ ಬರಲಿದೆ. ಎರಡು ಬಾರಿ ಚುನಾವಣೆ ಸ್ಪರ್ಧಿಸಿ ಸೋತಿದ್ದ ನಿಖಿಲ್ ಈ ಬಾರಿಯಾದರೂ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅಷ್ಟೇ ಅಲ್ಲದೆ, ಕುಮಾರಸ್ವಾಮಿಗೆ ಈ ಗೆಲುವು ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಮಗನ ಗೆಲುವಿಗಾಗಿ ಈಗ ದೇವರ ಮೊರೆ ಹೋಗುತ್ತಿದ್ದಾರೆ.