Select Your Language

Notifications

webdunia
webdunia
webdunia
webdunia

ಕಾರವಾರ ಬಸ್‌ನಲ್ಲಿ ನೋಟಿನ ಕಂತೆಗಳು: ಆರೋಪಿಗಳು ಪೊಲೀಸ್ ವಶಕ್ಕೆ

ಕಾರವಾರ ಬಸ್‌ನಲ್ಲಿ ನೋಟಿನ ಕಂತೆಗಳು: ಆರೋಪಿಗಳು ಪೊಲೀಸ್ ವಶಕ್ಕೆ
ಕಾರವಾರ , ಭಾನುವಾರ, 1 ಮಾರ್ಚ್ 2015 (13:04 IST)
ಖಾಸಗಿ ಬಸ್‌ನಲ್ಲಿ ಹವಾಲಾ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ತಾಲ್ಲೂಕಿನ ಚಿತ್ತಾಕುಲ ಪೊಲೀಸರು  ತಡರಾತ್ರಿ ಬಂಧಿಸಿದ್ದು, ಅವರ ಬಳಿಯಿದ್ದ ರೂ. 60.29 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. 
 
ಗುಜರಾತ್‌ ಮೂಲದ ದಿನೇಶ್‌ ಬಾಯ್‌ ಮೋದಿ ಹಾಗೂ ನಟೋರ್‌­ಲಾಲ್‌ ಪಟೇಲ್‌ ಬಂಧಿತರು. ಕರ್ನಾಟಕ–ಗೋವಾ ಗಡಿಭಾಗವಾದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಚಿತ್ತಾಕುಲ ಪೊಲೀಸರ ವಶಕ್ಕೆ ನೀಡಿದರು.
 
ಆರೋಪಿಗಳು ರೂ. 1,000 ಮತ್ತು ರೂ. 500 ನೋಟುಗಳ ಕಂತೆಗಳನ್ನು ಜಾಕೆಟ್‌ ರೂಪದ ಬನಿಯನ್‌ನೊಳಗೆ ಅಡಗಿಸಿಟ್ಟುಕೊಂಡಿದ್ದರು. ತಪಾಸಣೆ ವೇಳೆ ಆರೋಪಿಗಳು ‘ನಮಗೆ ಶಸ್ತ್ರಚಿಕಿತ್ಸೆಯಾಗಿದೆ. ಹಾಗಾಗಿ ನಮ್ಮನ್ನು ಮುಟ್ಟ­ಬೇಡಿ, ನೋವಾಗುತ್ತದೆ’ ಎಂದು ಹೇಳಿದ್ದಾರೆ. ಇದರಿಂದ ಅನುಮಾನ ಬಂದು, ಅವರನ್ನು ತಪಾಸಣೆ ಮಾಡಿದಾಗ ಹಣ ದೊರೆಯಿತು. ಗೋವಾದಿಂದ ಮಂಗಳೂರಿಗೆ ಅವರು ಈ ಹಣ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
 
‘ಈ ಹಣಕ್ಕೆ ಯಾವುದೇ ದಾಖಲೆ ಇಲ್ಲ. ಅಲ್ಲದೇ ಇದು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿಯಬೇಕಿದೆ. ಆರೋಪಿಗಳು ಗುಜರಾತ್‌ನಿಂದ ಮಡಗಾಂವ್‌ಗೆ ರೈಲಿನಲ್ಲಿ ಬಂದು, ಅಲ್ಲಿಂದ ಏಜೆಂಟ್‌ ನೀಡಿದ ಹಣವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುವುದು ಹಾಗೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜು ತಿಳಿಸಿದರು.
 

Share this Story:

Follow Webdunia kannada