ಹಾಸನ: ಹಾಸನಾಂಬೆ ದೇಗುಲ ಭಕ್ತರಿಗಾಗಿ ತೆರೆಯಲಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇಗುಲಕ್ಕೆ ವೀಕೆಂಡ್ ನಲ್ಲಿ ಕಾಲಿಡಲೂ ಆಗದಷ್ಟು ರಷ್ ಕಂಡುಬರುತ್ತಿದೆ.
ಈ ಬಾರಿ ಹಾಸನಾಂಬೆ ದೇವಾಲಯ ಜಾತ್ರೆಯನ್ನು ಎಂದಿಗಿಂತಲೂ ಅದ್ಧೂರಿಯಾಗಿ ಮಾಡಲಾಗುತ್ತಿದೆ. ವರ್ಣರಂಜಿತ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರನ್ನು ಸೆಳೆಯುತ್ತಿದೆ. ದಿನದ 24 ಗಂಟೆಯೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಕಿಲೋಮೀಟರ್ ಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ. ಸಾಮಾನ್ಯ ಸರತಿ, ವಿಐಪಿ ಮತ್ತು ಪಾಸ್ ಪಡೆದವರಿಗಾಗಿ ಪ್ರತ್ಯೇಕ ಸಾಲು ಮಾಡಲಾಗಿದೆ. ಹಾಗಿದ್ದರೂ ಎಲ್ಲಾ ಕಡೆ ರಷ್ ಕಂಡುಬರುತ್ತಿದೆ. ವೀಕೆಂಡ್ ಆಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ.
ಇವರ ಜೊತೆಗೆ ವಿಐಪಿಗಳ ದಂಡೂ ಇದೆ. ರಾಜಕೀಯ ಗಣ್ಯರ ಜೊತೆಗೆ ರಾಜಮಾತೆ ಪ್ರಮೋದಾ ದೇವಿ, ಸಾಲು ಮರದ ತಿಮ್ಮಕ್ಕ ಸೇರಿದಂತೆ ಅನೇಕ ಗಣ್ಯರೂ ಹಾಸನಾಂಬೆಯ ದರ್ಶನ ಪಡೆದು ಹೋಗಿದ್ದಾರೆ. ನವಂಬರ್ 3 ರವರೆಗೂ ಹಾಸನಾಂಬೆಯ ದರ್ಶನ ಪಡೆಯಲು ಅವಕಾಶವಿದೆ.