ರಾಯಚೂರು: ಶಾಲೆಗೆ ಹೋಗುವ ವಯಸ್ಸಿನ ಚಿಕ್ಕಮಕ್ಕಳು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೂ ಯಾವುದೋ ವಸ್ತುವಿಗೆ ಆಸೆಪಟ್ಟು ಕಳ್ಳತನ ಮಾಡಿಬಿಡುತ್ತಾರೆ. ಇದನ್ನು ಚಿಕ್ಕಂದಿನಿಂದಲೇ ತಿದ್ದಬೇಕು ಎನ್ನುವುದು ನಿಜ. ಆದರೆ ಅಂತಹ ಒಂದು ತಪ್ಪಿಗೆ ಇಲ್ಲೊಬ್ಬ ಗುರೂಜಿ ಪುಟ್ಟ ಬಾಲಕನಿಗೆ ಮನಸೋ ಇಚ್ಛೆ ದಂಡಿಸಿದ್ದಾನೆ.
ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ ಈ ಘಟನೆ ನಡೆದಿದೆ. ಶ್ರವಣ ಕುಮಾರ ಎಂಬ ಪುಟ್ಟ ಬಾಲಕ ಸಹಪಾಠಿಯ ಪೆನ್ನು ಕದ್ದಿದ್ದ. ಈ ವಿಚಾರ ತಿಳಿದ ಸಹಪಾಠಿ ಗುರೂಜಿಗೆ ದೂರು ನೀಡಿದ್ದ. ಹೀಗಾಗಿ ಬಾಲಕನನ್ನು ಕರೆಸಿಕೊಂಡ ಗುರೂಜಿ ಆತನಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದೇ ಆತನನ್ನು ಎರಡು ದಿನಗಳ ಕಾಲ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಬಾಲಕನ ತಾಯಿ ಆಶ್ರಮಕ್ಕೆ ಬಂದಾಗ ಮಗನ ಅವಸ್ಥೆ ನೋಡಿ ಗಾಬರಿಯಾಗಿದೆ. ಎರಡು ದಿನಗಳ ಕಾಲ ಹಲ್ಲೆ, ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಪರಿಣಾಮ ಬಾಲಕ ತೀವ್ರ ಅಸ್ವಸ್ಥನಾಗಿದ್ದ.
ಕಣ್ಣುಗಳು ಬಾತುಕೊಂಡು ಮೈ-ಕೈಯಲ್ಲೆಲ್ಲಾ ಹೊಡೆದ ಗುರುತುಗಳಿತ್ತು. ಬಳಿಕ ಆತನನ್ನು ಅಲ್ಲಿಂದ ಕರೆದುಕೊಂಡು ಬಂದ ತಾಯಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಗನ ಸ್ಥಿತಿ ಕಂಡು ಆಕ್ರೋಶಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.