Select Your Language

Notifications

webdunia
webdunia
webdunia
webdunia

ಚುನಾವಣೆಯಲ್ಲಿ ಸಫಲವಾದ ಸರ್ಕಾರ ಬಿಬಿಎಂಪಿ ವಿಭಜನೆಗೆ ಸಿದ್ಧತೆ

ಚುನಾವಣೆಯಲ್ಲಿ ಸಫಲವಾದ ಸರ್ಕಾರ ಬಿಬಿಎಂಪಿ ವಿಭಜನೆಗೆ ಸಿದ್ಧತೆ
ಬೆಂಗಳೂರು , ಶುಕ್ರವಾರ, 3 ಜುಲೈ 2015 (17:04 IST)
ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಸರ್ಕಾರ ಶತ ಪ್ರಯತ್ನ ನಡೆಸಿ ಎಂಟು ವಾರಗಳ ಕಾಲಾವಕಾಶ ಪಡೆಯುವಲ್ಲಿ ಸಫಲವಾಗಿದ್ದು, ಇದೇ ಬೆನ್ನಲ್ಲೇ ಬಿಬಿಎಂಪಿಯನ್ನು ಮೂರು ಭಾಗಗಳನ್ನಾಗಿ ವಿಭಜಿಸಲು ನಿರ್ಧಾರ ಕೈಗೊಂಡಿದೆ. 
 
ಈ ಸಂಬಂಧ ಈಗಾಗಲೇ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದಿರುವ ಸರ್ಕಾರ, ವಿಧಾನ ಪರಿಷತ್‌ನಲ್ಲಿಯೂ ಅಂಗೀಕಾರ ಪಡೆಯಲು ಈ ಹಿಂದೆ ಯತ್ನಿಸಿತ್ತು. ಆದರೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೈ ಬಿಟ್ಟಿತ್ತು. ಬಳಿಕ ಸರ್ಕಾರವು ವಿಸ್ತೃತ ವರದಿ ತಯಾರುಸುವ ಸಲುವಾಗಿ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಿತ್ತು. ವರದಿ ಪ್ರಸ್ತುತ ಸಿದ್ಧವಾಗಿತ್ತು, ಇನ್ನು ಎರಡು ದಿನದಲ್ಲಿ ಸಂಪೂರ್ಣ ವರದಿಯನ್ನು ಸರ್ಕಾರ ತರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
 
ಇದೇ ವರದಿ ಆಧರಿಸಿ ವಿಧೇಯಕವನ್ನು ಸಿದ್ಧಪಡಿಸಲಿರುವ ಸರ್ಕಾರ, ವಿಧಾನ ಪರಿಷತ್‌ನಲ್ಲಿ ಮಂಡಿಸಲಿದೆ. ಒಂದು ವೇಳೆ ಪರಿಷತ್‌ನಲ್ಲಿ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದಲ್ಲಿ ಮತ್ತೆ ವಿಧೇಯಕವನ್ನು ಎರಡನೇ ಬಾರಿಗೆ ವಿಧಾನಸಭೆಯಲ್ಲಿ ಮಂಡಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯಪಾಲರು ಯಾವ ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಚಾರದ ಮೇಲೆ ಸರ್ಕಾರದ ಯೋಜನೆ ನಿರ್ಧರಿತವಾಗಲಿದೆ. 
 
ಇನ್ನು ಪ್ರತಿಪಕ್ಷಗಳು ಈ ಹಿಂದಿನಿಂದಲೂ ಕೂಡ ಕೆಂಪೇಗೌಡರ ಬೆಂಗಳೂರನ್ನು ವಿಭಜನೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿವೆ. ಈ ನಡುವೆ ಸರ್ಕಾರವು ಪಾರದರ್ಶಕ ಆಡಳಿತ ಎಂದು ಹೇಳಿಕೊಂಡು ಬಿಬಿಎಂಪಿಯನ್ನು ಮೂರು ಭಾಗಗಳನ್ನಾಗಿ ವಿಭಜಿಸಲು ಮುಂದಾಗಿದೆ.

Share this Story:

Follow Webdunia kannada