Select Your Language

Notifications

webdunia
webdunia
webdunia
webdunia

ಬರ ಹಿನ್ನೆಲೆ ಸಾಲದ ಮೇಲಿನ ವರ್ಷದ ಬಡ್ಡಿ ಮನ್ನಾ: ಸರ್ಕಾರದ ಸಹಕಾರ

ಬರ ಹಿನ್ನೆಲೆ ಸಾಲದ ಮೇಲಿನ ವರ್ಷದ ಬಡ್ಡಿ ಮನ್ನಾ: ಸರ್ಕಾರದ ಸಹಕಾರ
ಬೆಂಗಳೂರು , ಬುಧವಾರ, 30 ಸೆಪ್ಟಂಬರ್ 2015 (14:30 IST)
ರಾಜ್ಯದ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲೆ ಇರುವ ಒಂದು ವರ್ಷದ ಬಡ್ಡಿದರವನ್ನು ಸರ್ಕಾರ ಮನ್ನಾ ಮಾಡಿದ್ದು, ರೈತರ ಪರವಾಗಿ ಒಟ್ಟು 296.52 ಕೋಟಿ ರೂ. ಸಾಲದ ಬಡ್ಡಿಯನ್ನು ಬ್ಯಾಂಕ್‌ಗಳಿಗೆ ಸರ್ಕಾರವೇ ಭರಿಸಲಿದೆ ಎಂದು ರಾಜ್ಯದ ಸಹಕಾರ ಇಲಾಖೆ ಸಚಿವ ಮಹಾದೇವ ಪ್ರಸಾದ್ ಅವರು ತಿಳಿಸಿದ್ದಾರೆ. 
 
ನಗರದ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ಪಡೆದಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕ್ಷಾಮ ಆವರಿಸಿದ್ದು, ಪರಿಣಾಮ ರೈತರು ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಹಿತದೃಷ್ಠಿಯಿಂದ ಸರ್ಕಾರವು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಕ್ರಮ ಕೈಗೊಂಡಿದೆ ಎಂದರು.
 
ಬಳಿಕ, ಸಣ್ಣ ಪ್ರಮಾಣದ ಸಾಲ ಮಾಡಿಕೊಂಡಿರುವ ರೈತರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಅಲ್ಪಾವಧಿ ಮತ್ತು ಧೀರ್ಘಾವಧಿ ಸಾಲ ಮಾಡಿಕೊಂಡಿರುವ ರೈತರನ್ನು ಪರಿಗಣಿಸಿ ತೀರ್ಮಾನಕ್ಕೆ ಬರಲಾಗಿದ್ದು, ಅವರ ಸಾಲದ ಮೇಲಿರುವ ಒಂದು ವರ್ಷದ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಲಿದೆ. ಇದಕ್ಕಾಗಿ ಸರ್ಕಾರ ಒಟ್ಟು 296.52 ಕೋಟಿ ರೂ. ಬ್ಯಾಂಕ್‌ಗಳಿಗೆ ಪಾವತಿಸಲಿದೆ. ಅಲ್ಲದೆ ಬರಗಾಲ ಹಿನ್ನೆಲೆಯಲ್ಲಿ ರೈತರು ಈ ವರ್ಷದ ಸಾಲದ ಕಂತನ್ನು ಪಾವತಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ವರ್ಷ ಪಾವತಿಸಬೇಕಿದ್ದ ಕಂತನ್ನು ಒಂದು ವರ್ಷಕ್ಕೆ ಮುಂದೂಡಲು ಎಲ್ಲಾ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳಿಗೆ ಆದೇಶ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. 
 
ಇದೇ ವೇಳೆ, ಈ ವರ್ಷದ ಕಂತನ್ನು ಕಟ್ಟಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಲ್ಲಿ ರೈತರಿಂದ ಬಲವಂತ ಮಾಡಿ ಕಂತು ಕಟ್ಟಿಸಿಕೊಳ್ಳಬೇಡಿ. ಕಟ್ಟಲು ಸಾಧ್ಯವಾಗುವಂತಹವರು ಕಟ್ಟಲಿ. ಇಲ್ಲವಾದಲ್ಲಿ ಮುಂದಿನ ವರ್ಷ ಕಟ್ಟಿಸಿಕೊಳ್ಳಿ ಎಂದು ಆದೇಶದಲ್ಲಿ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದ ಸಚಿವರು, ಪ್ರಸ್ತುತ ಕೇಂದ್ರದ ರಾಷ್ಟ್ರೀಕೃತ ಬ್ಯಾಂಕ್‌ಗಳ ರಾಜ್ಯದ ವಿಭಾಗಗಳಲ್ಲಿ ಒಟ್ಟು 5.6 ಲಕ್ಷ ಕೋಟಿ ಠೇವಣಿ ಇದೆ. ಆದರೆ ರಾಜ್ಯದ ರೈತರಿಗೆ ಸಾಲ ನೀಡಲು ಹಿಂಜರಿಯುತ್ತಿದ್ದು, ಕೇವಲ 21 ಲಕ್ಷ ಕೋಟಿ ಸಾಲ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. . 
 
ಇನ್ನು ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿರುವ ರೈತ ಮುಖಂಡರು, ಕೇವಲ ಬಡ್ಡಿ ಮನ್ನಾ ಮಾಡುವ ಮೂಲಕ ಸರ್ಕಾರ ಕೈ ತೊಳೆದುಕೊಂಡಿದೆ. ಸಂಪೂರ್ಣವಾಗಿ ಸಾಲವನ್ನೇ ಮನ್ನಾ ಮಾಡುವ ನಿರೀಕ್ಷೆ ಇತ್ತು ಎಂದಿದ್ದು, ಸಣ್ಣ ಪ್ರಮಾಣದಲ್ಲಿ ಸಾಲ ಮಾಡಿರುವ ರೈತರನ್ನು ಕಡೆಗಣಿಸಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada