Select Your Language

Notifications

webdunia
webdunia
webdunia
webdunia

ಚುನಾವಣೆಯಲ್ಲಿ ದಣಿದ ಬಿಜೆಪಿ ನಾಯಕರಿಂದ ವಿದೇಶ ಪ್ರವಾಸ

ಚುನಾವಣೆಯಲ್ಲಿ ದಣಿದ ಬಿಜೆಪಿ ನಾಯಕರಿಂದ ವಿದೇಶ ಪ್ರವಾಸ
ಹುಬ್ಬಳ್ಳಿ , ಭಾನುವಾರ, 4 ಮೇ 2014 (11:21 IST)
ಲೋಕಸಭೆ ಚುನಾವಣೆ ಬಿಜೆಪಿ ಮುಖಂಡರನ್ನು ಭರಪೂರ ಹೈರಾಣಾಗಿಸಿರುವಂತೆ ಕಾಣಿಸುತ್ತದೆ. ಚುನಾವಣೆ ಮುಗಿದದ್ದೆ ತಡ ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ವಿದೇಶಕ್ಕೆ ನೆಗೆದಿದ್ದಾರೆ. 
 
ಹೌದು, ಚುನಾವಣೆ ಮುಗಿದಾಕ್ಷಣ ಜಗದೀಶ್ ಶೆಟ್ಟರ್ ವಿದೇಶಕ್ಕೆ ನೆಗೆದರೆ ಇದರ ಬೆನ್ನಲ್ಲೇ ಪ್ರಹಾದ್ ಜೋಶಿಯವರೂ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಇಬ್ಬರೂ ಮುಂಚೂಣಿ ನಾಯಕರು ದೀರ್ಘ ಕಾಲದ ಪ್ರವಾಸಕ್ಕೆ ತೆರಳಿರುವುದು ಗಮನಾರ್ಹ. 
 
ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಜೋಶಿ ಸ್ವತಃ ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದರು. ತಮ್ಮ ಕ್ಷೇತ್ರವನ್ನು ಬಲಪಡಿಸುವುದರ ಜತೆಗೆ ರಾಜ್ಯದ ನೊಗ ಹೊತ್ತ ಪರಿಣಾಮ ಇನ್ನಿತರ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು. ಹೀಗಾಗಿ ದಣಿದಿರುವ ಪ್ರಹ್ಲಾದ ಜೋಶಿ, ರಾಜಕೀಯ ಜಂಜಡಗಳಿಂದ ದೂರ ಉಳಿಯ ಬಯಸಿ ವಿದೇಶಕ್ಕೆ ತೆರಳಿದ್ದಾರೆ. ಇನ್ನು ಪ್ರತಿ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಂತೂ ಚುನಾವಣೆ ಮುಗಿದ ಕೂಡಲೇ ಕುಟುಂಬ ಸಮೇತ ವಿದೇಶಕ್ಕೆ ಹೊರಟು ಬಿಟ್ಟಿದ್ದಾರೆ. 
 
ಬಿಜೆಪಿಯ ಇಬ್ಬರೂ ಮುಂಚೂಣಿ ನಾಯಕರು ವಿದೇಶಕ್ಕೆ ತೆರಳಿರುವ ಪರಿಣಾಮ ಪಕ್ಷದ ಚಟುವಟಿಕೆಯು ಇದೀಗ ನಿಂತ ನೀರಾಗಿದೆ. ಅವರು ಬಂದ ಬಳಿಕವೇ ವಿಧಾನ ಪರಿಷತ್ ಚುನಾವಣೆ ಇತ್ಯಾದಿ ಚಟುವಟಿಕೆಗಳು ನಡೆಯಲಿವೆ. 
 
ಆಸ್ಟ್ರೇಲಿಯಾದಲ್ಲಿ 
 
ಆಸ್ಟ್ರೇಲಿಯಾದ ಬಸವ ಸಮಿತಿಯಿಂದ ಆಹ್ವಾನ ಬಂದಿದ್ದೆ ತಡ ಶೆಟ್ಟರ್ ಕುಟುಂಬ ಸಮೇತರಾಗಿ  ಏಪ್ರಿಲ್ 23ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಅವರು ನ್ಯೂಜಿಲೆಂಡ್‌ಗೂ ತೆರಳಲಿದ್ದು,  ಹುಬ್ಬಳ್ಳಿಗೆ ಬಹುಶಃ ಮೇ 15ರಂದು ಬರುವ ಸಾಧ್ಯತೆ ಇದೆ.
 
ಹಾಂಕಾಂಗ್‌ನಲ್ಲಿ 
 
ಚುನಾವಣೆ ಮುಗಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಕುಟುಂಬ ಸಮೇತರಾಗಿ ವಿದೇಶದತ್ತ ಮುಖ ಮಾಡಿದ್ದಾರೆ. ಏಪ್ರಿಲ್ 30ರಂದು ಹಾಂಕಾಂಗ್‌ಗೆ ತೆರಳಿರುವ ಅವರು ಅಲ್ಲಿಂದ ಮಕಾವೋ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 8ರಂದು ಅವರು ಹುಬ್ಬಳ್ಳಿಗೆ ವಾಪಸ್ಸಾಗಲಿದ್ದಾರೆ.
 
ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಸ್ತಬ್ಧ
 
ಈ ಇಬ್ಬರೂ ನಾಯಕರು ದಣಿವಾರಿಸಿಕೊಳ್ಳಲು ವಿದೇಶಕ್ಕೆ ನೆಗೆದಿದ್ದರೆ, ಇತ್ತ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಅವರ ದಾರಿ ಕಾಯುತ್ತ ದಣಿಯಲಾರಂಭಿಸಿದ್ದಾರೆ. ರಾಜ್ಯದಲ್ಲಿ ವಿಧಾನ ಪರಿಷತ್‌ನ ನಾನಾ ಕ್ಷೇತ್ರಗಳಿಗೆ ಚುನಾವಣೆ ಸನ್ನಿಹಿತವಾಗುತ್ತಿದ್ದು, ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಟಿಕೆಟ್ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೋಶಿ ಹಾಗೂ ಶೆಟ್ಟರ್ ವಿದೇಶದಿಂದ ಬಂದ ಬಳಿಕವೇ ಅಭ್ಯರ್ಥಿ ನಿರ್ಧಾರವಾಗಲಿದೆ.
 

Share this Story:

Follow Webdunia kannada