ಬೆಂಗಳೂರು: ಮನೆ ಮನೆಗೆ ಆರೋಗ್ಯ ದೂರದ ಮಾತು ಸ್ವಾಮಿ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೌಚಾಲಯ ಸರಿಮಾಡಿ ಎಂದು ಕಾಂಗ್ರೆಸ್ ಸರ್ಕಾರವನ್ನು ವಿಪಕ್ಷ ನಾಯಕ ಆರ್ ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
ಕಾಕಾ ಪಟೀಲನಿಗೂ ಫ್ರೀ, ನಿಂಗೂ ಫ್ರೀ ಎಂದು ಕನ್ನಡಿಗರ ಕಿವಿ ಮೇಲೆ ಹೂ ಇಟ್ಟು ಅಧಿಕಾರಕ್ಕೀರಿದ್ದಾಯ್ತು. ಈಗ 'ಮನೆ ಮನೆಗೆ ಆರೋಗ್ಯ' ಎಂದು ಪುಕ್ಕಟೆ ಪ್ರಚಾರಕ್ಕೆ ಮತ್ತೊಂದು ದಾರಿ ಹುಡುಕಿಕೊಂಡಿರುವ ಕಾಂಗ್ರೆಸ್ ಸರ್ಕಾರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೌಚಾಲಯ ಬಂದ್ ಮಾಡಿ ಪುರುಷರು ಮಹಿಳೆಯರ ವಾರ್ಡ್ ನ ಶೌಚಾಲಯಕ್ಕೆ ಹೋಗುವ ಶೋಚನೀಯ ಪರಿಸ್ಥಿತಿ ತಂದಿಟ್ಟಿದೆ.
ರಾಜಧಾನಿಯಲ್ಲಿರುವ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಈ ಗತಿ ಆದರೆ ಇನ್ನು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳ ಅವಸ್ಥೆ ಏನಾಗಿರಬಹುದು ಎಂದು ನೀವೇ ಊಹಿಸಿಕೊಳ್ಳಿ.
ಪೊಳ್ಳು ಘೋಷಣೆಗಳು, ಟೊಳ್ಳು ಭರವಸೆಗಳಿಂದ ಆರೋಗ್ಯ ಕ್ಷೇತ್ರ ಸುಧಾರಣೆ ಆಗುವುದಿಲ್ಲ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಎಸ್ ಪ್ರಕಾಶ್ ಪಾಟೀಲ್ ಅವರೇ. ಬಡವರು, ಕೆಳಮಧ್ಯಮ ವರ್ಗದ ಜನರಿಗೆ ಆಸರೆಯಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲು ಮೂಲಸೌಕರ್ಯ ನಿರ್ವಹಣೆ ಮಾಡಿ. ಮನೆ ಮನೆಗೆ ಆರೋಗ್ಯ ಕೊಡದಿದ್ದರೂ ಪರವಾಗಿಲ್ಲ, ಕನಿಷ್ಠ ಪಕ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಸಿಗುವಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.