ಅಕ್ಟೋಬರ್ ೨೬-೨೦೨೧: ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ, ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಅಕ್ಟೋಬರ್ ೨೮ರಂದು ಆಯೋಜಿಸಿರುವ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲ ೩೧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಚರ್ಚಿಸಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಸರ್ಕಾರದ ಸಚಿವರುಗಳ ಸಹಕಾರದೊಂದಿಗೆ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಕ್ಟೋಬರ್ ೨೮ರಂದು ನಡೆಯಲಿರುವ ಈ ಗೀತಗಾಯನ ಕೇವಲ ಸರ್ಕಾರದ ಅಧಿಕಾರಿ ಸಿಬ್ಬಂದಿಗಳು ಮಾಡುವ ಸರ್ಕಾರಿ ಕಾರ್ಯಕ್ರಮವಾಗದೇ ಕನ್ನಡ ನಾಡಿನ ಜನಮಾನಸದ ಅಭಿಮಾನದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು ಸ್ವಯಂ ಸ್ಫೂರ್ತಿಯಿಂದ ಜನತೆ ಈ ಗೀತಗಾಯನದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನ ಅಭಿವ್ಯಕ್ತಿಗೊಳಿಸಲು ವೇದಿಕೆಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿ ಜಿಲ್ಲಾಡಳಿತದ ಮೇಲಿದೆ. ಅದಕ್ಕೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ನೀಡುವಿಕೆ ಮತ್ತು ಕಾರ್ಯಕ್ರಮ ಆಯೋಜನೆಗೆ ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಬೇಕೆಂದು ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಡುವ ತಂಡಗಳ ಮಾಹಿತಿ, ಅವರಿಗೆ ಬೇಕಾದ ಕನಿಷ್ಠ ಅಗತ್ಯಗಳು ಮತ್ತು ಈ ಕಾರ್ಯಕ್ರಮದ ಪ್ರಚಾರ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಂಮವ, ನಿಸಾರ್ ಅಹಮ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಡಾ. ಹಂಸಲೇಖ ಅವರ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು- ಈ ಮೂರು ಗೀತೆಗಳು ಅಕ್ಟೋಬರ್ ೨೮ ರಂದು ಬೆಳಿಗ್ಗೆ ೧೧.00ಗಂಟೆಗೆ ಏಕ ಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ. ಇದಕ್ಕೆ ಬೇರ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಹಾಗೂ ವಿಶ್ವಾದ್ಯಂತ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ತಮಗೆ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಸೇರಿ ಹಾಡುವ ತಾಂತ್ರಿಕ ಸಂಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದೆ. ಇದರ ಮೂಲಕ ಒಂದೇ ಬಾರಿ ವಿಶ್ವದಾದ್ಯಂತ ಕನ್ನಡ ಗೀತೆಗಳು ಲಕ್ಷ ಲಕ್ಷ ಕಂಠಗಳಲ್ಲಿ ಮೊಳಗಲಿದೆ. ಇದು ಈ ಹಿಂದೆ ಎಂದೂ ನಡೆದಿರದ ಬೃಹತ್ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ.
ಇಡೀ ನಾಡನ್ನು ಈ ೬೬ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಮಯವನ್ನಾಗಿ ಮಾಡಲು, ಕನ್ನಡದ ಭಾವಲಹರಿ ಜನಮನದ ನರನಾಡಿಗಳಲ್ಲಿ ಸಂಚರಿಸುವ ರೋಮಾಂಚನವನ್ನು ಉಂಟು ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಅಭಿಯಾನ ರೂಪುಗೊಂಡಿದೆ. ನಾಡಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಶಾಲಾ- ಕಾಲೇಜುಗಳ ಆವರಣದಲ್ಲಿ, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ಆವರಣಗಳಲ್ಲಿ ಹಾಗೂ ಮೈಸೂರಿನ ಅರಮನೆಯ ಮುಂಭಾಗ ಮತ್ತು ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ ಹಾಗೂ ಮಹಾನವಮಿ ದಿಬ್ಬವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಪ್ರಸಿದ್ಧ ಸ್ಮಾರಕಗಳ ಮುಂದೆ ಸಾವಿರಾರು ಜನರು ಒಟ್ಟಿಗೆ ನಿಂತು ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಈ ಕಾರ್ಯಕ್ರಮದ ಯಶಸ್ವಿ ಸಂಯೋಜನೆಗಾಗಿ ಪ್ರತೀ ಜಿಲ್ಲೆಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಈ ಸ್ಥಳಗಳೇ ಅಲ್ಲದೆ ರಾಜ್ಯದ ಎಲ್ಲ ದೊಡ್ಡ ಮಾರುಕಟ್ಟೆಗಳು, ಆಟೋರಿಕ್ಷಾ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಈ ಗೀತ ಗಾಯನ ನಡೆಯಲಿದೆ. ದೊಡ್ಡ ಸಂಖ್ಯೆಯ ಗೀತಗಾಯನ ಸ್ಥಳಗಳಲ್ಲಿ ಈ ಗೀತೆಯ ಧಾಟಿಯನ್ನು ಕಲಿಸಲು ಪರಿಣತ ಸಂಗೀತ ಗಾಯಕರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ವಿಮಾನ ನಿಲ್ದಾಣಗಳಲ್ಲೂ ಮೊಳಗಲಿದೆ ಕನ್ನಡದ ಗಾಯನ
ಈ ಅಭಿಯಾನದ ಅಂಗವಾಗಿ ವಿಶೇಷವಾಗಿ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲೂ ಸಹ ಈ ಕನ್ನಡದ ಗೀತಗಾಯನ ಅನುರುಣಿಸಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿಯೂ ಸಹ ಸಾವಿರರು ಜನ ಒಟ್ಟಿಗೆ ನಿಂತು ಈ ಕನ್ನಡ ಗೀತೆಗಳ ಗಾಯನ ಮಾಡಲಿದ್ದಾರೆ.
ಮೆಟ್ರೋದಲ್ಲಿ ಮೊಳಗಲಿದೆ ಕನ್ನಡ ಕಂಠ
ಬೆಂಗಳೂರು ಮೆಟ್ರೋದಲ್ಲಿ ಕನ್ನಡಮಯ ವಾತಾವರಣ ಉಂಟುಮಾಡಲು ಅಕ್ಟೋಬರ್ ೨೮ರಂದು ಬೆಳಿಗ್ಗೆ ೧೧.೦೦ಗಂಟೆಗೆ ಬೆಂಗಳೂರು ಮೆಟ್ರೋದ ಎಲ್ಲಾ ರೈಲುಗಳಲ್ಲೂ ಸುಗಮ ಸಂಗೀತ ಗಾಯನ ತಂಡಗಳು ಈ ಮೂರು ಗೀತೆಗಳನ್ನು ಹಾಡುತ್ತವೆ. ಮೆಟ್ರೋದ ಎಲ್ಲಾ ೫೧ ನಿಲ್ದಾಣಗಳಲ್ಲಿ ಈ ಕನ್ನಡ ಗೀತೆಗಳ ಗಾಯನ ಧ್ವನಿವರ್ಧಕಗಳ ಮೂಲಕ ಪ್ರಸಾರವಾಗಲಿದೆ. ಅದರ ಜೊತೆಗೆ ಅತ್ಯಂತ ಜನ ನಿಬಿಡವಾದ 5 ಮೆಟ್ರೋ ನಿಲ್ದಾಣಗಳಲ್ಲಿ ಸಮೂಹ ಗೀತಗಾಯನ ನಡೆಯಲಿದೆ. ಅದರ ಜೊತೆಗೆ ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಅದರ ಮೂಲಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.