ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮಕ್ಕೆ ಕೌಂಟ್ಡೌನ್ ಶುರುವಾಗಿದೆ. ಬೆಟ್ಟಕ್ಕೆ ಪ್ರತಿ ಆಷಾಢ ಶುಕ್ರವಾರದಂದು ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ.
ಅಂತೆಯೇ ಈ ಬಾರಿಯೂ ಖಾಸಗಿ ಬಸ್ಗಳಿಗೆ ನಿರ್ಬಂಧ ವಿಧಿಸಿದ್ದು, ಸರ್ಕಾರಿ ಬಸ್ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಷಾಢ ಪೂಜಾ ಕೈಂಕರ್ಯಗಳಿಗೆ ಸಿದ್ಧತೆ ಜೋರಾಗಿದೆ.
ಆಷಾಢ ಶುಕ್ರವಾರ ಬಂದ್ರೆ ಸಾಕು ಅರಮನೆ ನಗರಿ ಮೈಸೂರು ಹಾಗೂ ಚಾಮುಂಡಿ ಭಕ್ತರಿಗೆ ಸಂಭ್ರಮವೋ ಸಂಭ್ರಮ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ನಾಳೆ ನಾಡದೇವತೆ, ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ನಾಳೆ ಮುಂಜಾನೆ 3 ಗಂಟೆ 30 ನಿಮಿಷಕ್ಕೆ ಅಭಿಷೇಕದೊಂದಿಗೆ ಆರಂಭವಾಗುವ ವಿವಿಧ ರೀತಿಯ ಪೂಜಾ ಕೈಂಕರ್ಯ ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆಯಲಿವೆ. ನಾಳೆ ದೇವಿಗೆ ಲಕ್ಷ್ಮೀ ಅಲಂಕಾರ ಮಾಡಿ ಬಳಿಕ 5 ಗಂಟೆ 30 ನಿಮಿಷಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಆಷಾಢ ಶುಕ್ರವಾರದ ಪೂಜೆಗೆ ಚಾಮುಂಡಿಬೆಟ್ಟದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕಿರಿದಾದ ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಬಾರದೆಂದು ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.