ನಗರದ ಯಲಹಂಕ ವಾಯುನೆಲೆಯಲ್ಲಿ 2015ರ ಏರ್ ಇಂಡಿಯಾ ಶೋ ನಡೆಯುತ್ತಿದ್ದ ವೇಳೆಯಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ರನ್ ವೇ ಪಕ್ಕದಲ್ಲಿಯೇ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆಯಿತು.
ರನ್ ವೇಯಲ್ಲಿ ವಿಮಾನಗಳು ಮೇಲಿಂದ ಮೇಲೆ ಹಾರುತ್ತಿದ್ದವು. ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸಾಕಷ್ಟು ಜಾಗಕ್ಕೆ ವಿಸ್ತರಿಸಿಕೊಂಡಿತು. ಇದರಿಂದ ಸಾರ್ವಜನಿಕರಲ್ಲಿ ಕೆಲ ಕಾಲ ಆಘಾತ ಉಂಟು ಮಾಡಿತ್ತು. ಆದರೆ ಘಟನೆ ಕಂಡ ಕೂಡಲೇ ಅಲ್ಲಿಯೇ ರಕ್ಷಣೆಗೆಂದಿದ್ದ ಎನ್‌ಡಿಆರ್‌ಎಫ್ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರು. ಇದರಿಂದ ಸಂಭವಿಸಬೇಕಿದ್ದ ಬೃಹತ್ ಅನಾಹುತವೊಂದು ತಪ್ಪಿತು.
ಇನ್ನು ರನ್ ವೇ ಪಕ್ಕದಲ್ಲಿಯೇ ರಕ್ಷಣಾ ಸೈನಿಕರು ತಂಗಲು ಟೆಂಟ್‌ಗಳನ್ನು ಹಾಕಿಕೊಂಡಿದ್ದರು. ಅಲ್ಲದೆ ಬೆಂಕಿ ಕಾಣಿಸಿಕೊಂಡಿದ್ದ ಜಾಗದ ಪಕ್ಕದಲ್ಲಿಯೇ ಎರಡು ಜನರೇಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಮುನ್ನೆಚ್ಚರಿಕೆ ಕ್ರಮ ವಹಿಸಿದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಲಿಲ್ಲ.
ಘಟನೆಯ ಬಳಿಕ ಪರಿಶೀಲಿಸಿದ ಅಧಿಕಾರಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಯಾರೋ ಧೂಮಪಾನ ಮಾಡಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಶಂಕಿಸಿದ್ದಾರೆ.