ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇನ್ನೂ ಎಸ್ಐಟಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಅವರಿಗೆ ಕುಟುಂಬಸ್ಥರಿಂದಲೇ ಒತ್ತಡವಿದೆ ಎನ್ನಲಾಗಿದೆ.
ಸದ್ಯಕ್ಕೆ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ತಕ್ಷಣವೇ ಎಸ್ಐಟಿ ಮುಂದೆ ಶರಣಾಗಲು ಕುಟುಂಬಸ್ಥರಿಂದಲೇ ಒತ್ತಡ ಬಂದಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರಿಂದಾಗಿ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಇದು ದೇವೇಗೌಡರ ಕುಟುಂಬಕ್ಕೇ ಕಳಂಕ ತಂದ ಪ್ರಕರಣವಾಗಿದೆ.
ದುಬೈನಿಂದ ನಿನ್ನೆಯೇ ಪ್ರಜ್ವಲ್ ಬೆಂಗಳೂರಿಗೆ ಬರಬೇಕಾಗಿತ್ತು. ಆದರೆ ಅವರು ಬಂಧನ ಭೀತಿಯಿಂದ ಭಾರತಕ್ಕೆ ಬರದೇ ತಪ್ಪಿಸಿಕೊಂಡಿದ್ದಾರೆ. ಈಗಲೇ ವಿಚಾರಣೆಗೆ ಹಾಜರಾಗದೇ ಇದ್ದರೆ ಪ್ರಕರಣ ಮತ್ತಷ್ಟು ಗಂಭೀರವಾಗಲಿದೆ. ಆಗ ಪ್ರಜ್ವಲ್ ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಹೀಗಾಗಿ ಸದ್ಯಕ್ಕೆ ಅವರಿಗೆ ಆಪ್ತರೇ ಶರಣಾಗುವಂತೆ ಸಲಹೆ ನೀಡುತ್ತಿದ್ದಾರೆ.
ಈ ಮಧ್ಯೆ ಎಸ್ಐಟಿ ಟೀಂ ಜೊತೆ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಜಿ ಪರಮೇಶ್ವರ್ ಸಭೆ ನಡೆಸಿದ್ದು, ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಪ್ರಜ್ವಲ್ ಪತ್ತೆಗಾಗಿ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ಅವರು ಭಾರತಕ್ಕೆ ಬಂದ ತಕ್ಷಣವೇ ಬಂಧನಕ್ಕೊಳಗಾಗುವ ಸಾಧ‍್ಯತೆಯಿದೆ.