Select Your Language

Notifications

webdunia
webdunia
webdunia
webdunia

ಡಿಕೆಶಿಗೆ ಮುಹೂರ್ತ ಫಿಕ್ಸ್ ಮಾಡಲು ನಾನು ಚಿಕ್ಕವನು, ದೇವರೇ ಮುಹೂರ್ತ ಫಿಕ್ಸ್ ಮಾಡ್ತಾನೆ: ಹೆಚ್ಡಿಕೆ

ಡಿಕೆಶಿಗೆ ಮುಹೂರ್ತ ಫಿಕ್ಸ್ ಮಾಡಲು ನಾನು ಚಿಕ್ಕವನು, ದೇವರೇ ಮುಹೂರ್ತ ಫಿಕ್ಸ್ ಮಾಡ್ತಾನೆ: ಹೆಚ್ಡಿಕೆ
ಬೆಂಗಳೂರು , ಶುಕ್ರವಾರ, 24 ಏಪ್ರಿಲ್ 2015 (17:27 IST)
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮುಹೂರ್ತ ಫಿಕ್ಸ್ ಮಾಡಲು ನಾನು ಚಿಕ್ಕವನು. ದೇವರೇ ಅವರಿಗೆ ಸರಿಯಾದ ಸಮಯದಲ್ಲಿ ಮುಹೂರ್ತ ಫಿಕ್ಸ್ ಮಾಡ್ತಾರೆ ಎಂದು ಜಾತ್ಯಾತೀತ ಜನತಾ ದಳದ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
 
ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ. ಪ್ರಸ್ತುತ ಅವರು ಗಾಜಿನ ಮನೆಯಲ್ಲಿದ್ದಾರೆ. ನಾನು ಬೀದಿಯಲ್ಲಿ ನಿಂತಿದ್ದೇನೆ. ಒಂದು ವೇಳೆ ನಾನು ಅವರ ಮನೆಗೆ ಕಲ್ಲು ಹೊಡೆದಲ್ಲಿ ಅವರಿಗೇ ಪೆಟ್ಟು ಬೀಳುತ್ತದೆ. ಕಳ್ಳ ಆಸ್ತಿ ರಕ್ಷಣೆಗಾಗಿ ಸಚಿವರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ಸಾತನೂರು ಚಿತ್ರಮಂದಿರದಲ್ಲಿ ಯಾವರೀತಿಯ ಚಿತ್ರವನ್ನು ತೋರಿಸಿದ್ದರು ಎಂಬ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಯಡಿಯೂರಪ್ಪ ಹಾಗೂ ಜನಾರ್ಧನ ರೆಡ್ಡಿ ಕೂಡಾ ಸವಾಲ್ ಒಡ್ಡಿದ್ದರು. ಅವರಿಗಾದ  ಕಥೆಯೇ ಇವರದೂ ಕೂಡ. ಡಿ.ಕೆ.ಶಿವಕುಮಾರ್ ಅವರು ಅಪಮಾರ್ಗವನ್ನು ತುಳಿಯುತ್ತಿದ್ದು, ಎಲ್ಲಾ ಸಾಕ್ಷಿಗಳನ್ನು ಮೆಟ್ಟಿ ಗೆದ್ದು ಬರುತ್ತಿದ್ದಾರೆ ಎಂದು ಕಿಡಿಕಾರಿದರು.
 
ವಿಧಾನಸೌಧದಲ್ಲಿ ನಡೆದ ವಿಶೇಷ ಅದಿವೇಶನ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನನ್ನ ವಿರುದ್ಧ ಏಕವಚನ ಬಳಸಿದರು. ಸಭಾಪತಿ ಕಾಗೋಡು ತಿಮ್ಮಪ್ಪ ಕೂಡಾ ಕ್ಯಾರೆ ಎನ್ನಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಪ ನಿದ್ರೆಯಲ್ಲಿದ್ದರು ಅಂತ ಕಾಣಿಸುತ್ತದೆ. ಸದನದ ನಡೆಯಿಂದ ಬೇಸರಗೊಂಡು ಹೊರಗೆ ಬಂದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  
 
 
ಬಿಬಿಎಂಪಿ ಚುನಾವಣೆ ಮುಂದೂಡಿಕೆ: 
 
ಬಿಬಿಎಂಪಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಸರ್ಕಾರದ ಪರವಾಗಿ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಚುನಾವಣೆ ವಿಚಾರದಲ್ಲಿ ಸಿಎಂ ಜಯಗಳಿಸಿದ್ದಾರೆ. ಈ ಅವಧಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಹುಡುಕಲಿ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. 
 
ನಾನು ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವುದಿಲ್ಲ. ಆದರೆ ಸರ್ಕಾರ ಬಿಬಿಎಂಪಿ ವಿಭಜನೆಗೆ ಮುಂದಾಗಿರುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಸಮಾವೇಶ ಆಯೋಜಿಸಿ ಪ್ರತಿಭಟಿಸಲಿದ್ದೇವೆ ಎಂದರು. 
 
ಬಳಿಕ, ಚುನಾವಣೆ ವಿಚಾರದಲ್ಲಿ ನ್ಯಾಯಾಲಯದ ಮೂಲಕ ಸರ್ಕಾರಕ್ಕೆ ಜಯ ಸಿಕ್ಕಿದೆ. ಆದರೆ ಸಿಕ್ಕಿರುವ 6 ತಿಂಗಳ ಅವಧಿಯ ಒಳಗೆ ಪಾಲಿಕೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಿಎಂ ಸಿದ್ದರಾಮಯ್ಯನವರು ಗಮನ ಹರಿಸಲಿ ಎಂದು ಸವಾಲೆಸೆದರು. 
 
ಬಿಬಿಎಂಪಿಯಲ್ಲಿನ ಸಂಪನ್ಮೂಲಗಳು ಹೊರಗೆ ಹರಿಯದಂತೆ ತಡೆಯಬೇಕಿದೆ. ತಡೆಯುವಲ್ಲಿ ಸಫಲರಾದಲ್ಲಿ ಹಣವೂ ಉಳಿತಾಯವಾಗಲಿದೆ. ಹಾಗೆ ಉಳಿದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡಬಹುದು ಎಂದ ಅವರು, ಮುಂದಿನ ಚುನಾವಣೆಯಲ್ಲಿ ಜನತೆ ನಮ್ಮ ಪಕ್ಷವನ್ನು ಗೆಲ್ಲಿಸಿದಲ್ಲಿ ಈ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುತ್ತೇವೆ. ಆ ಮೂಲಕ ಪಾರದರ್ಶಕ ಆಡಳಿತ ನೀಡುತ್ತೇವೆ. ಅದನ್ನು ನಿರೂಪಿಸಿಯೇ ತೋರಿಸುತ್ತೇನೆ. ಒಂದು ವೇಳೆ ಸಾಧ್ಯವಿಲ್ಲ ಎಂದಾದಲ್ಲಿ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಡ್ಡಿ ಮುರಿದಂತೆ ನುಡಿದರು.   

Share this Story:

Follow Webdunia kannada