Select Your Language

Notifications

webdunia
webdunia
webdunia
webdunia

ದಲಿತ ನಾಯಕರು ಸಿಎಂ ಆಗುವುದು ಅಗತ್ಯವಿದೆ: ಕುಮಾರಸ್ವಾಮಿ

ದಲಿತ ನಾಯಕರು ಸಿಎಂ ಆಗುವುದು ಅಗತ್ಯವಿದೆ: ಕುಮಾರಸ್ವಾಮಿ
ರಾಮನಗರ , ಗುರುವಾರ, 19 ಫೆಬ್ರವರಿ 2015 (15:41 IST)
ರಾಜ್ಯದಲ್ಲಿ ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗುವ ಅಗತ್ಯವಿದೆ. ರಾಜ್ಯದಲ್ಲಿ ದಲಿತರಿಗೆ ಸಿಎಂ ಅವಕಾಶ ಸಿಗುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಕೆಲವರು ಹೇಳುತ್ತಿದ್ದಾರೆ. ಅದನ್ನು ಅವರು ನಿರೂಪಿಸಿ ತೋರಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮಾರ್ಮಿಕವಾಗಿ ನುಡಿದರು.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ನೈತಿಕತೆ ಉಳಿಸಿಕೊಂಡಿಲ್ಲ. ಅಲ್ಲದೆ ರಾಜ್ಯದಲ್ಲಿ ದಲಿತರಿಗೆ ಸಿಎಂ ಅವಕಾಶ ಸಿಗುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎನ್ನುತ್ತಾ ಇತರೆ ಪಕ್ಷಗಳ ಬಗ್ಗೆ ಕೆಲ ಮಂದಿ ಕುಟುಕುತ್ತಿದ್ದಾರೆ. ಪ್ರಸ್ತುತ ರಾಜ್ಯದ ಆಡಳಿತಕ್ಕೂ ಕೂಡ ದಲಿತ ಮುಖಂಡರೋರ್ವರು ಸಿಎಂ ಆಗಬೇಕಾದ ಅಗತ್ಯವಿದೆ. ಅದನ್ನು ಕಾಂಗ್ರೆಸ್ ನಲ್ಲಿ ಮಾತ್ರ ಅವಕಾಶ ಎನ್ನುತ್ತಿರುವವರು ದಲಿತರಿಗೆ ಅವಕಾಶ ನೀಡಿ ನಿರೂಪಿಸಿ ತೋರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾರ್ಮಿಕವಾಗಿ ಗುಡುಗಿದ್ದಾರೆ. 
 
ಇದೇ ವೇಳೆ ದಲಿತ ಮುಖಂಡರಿಗೆ ಸಿಎಂ ಪಟ್ಟ ನೀಡಬೇಕು ಎಂದು ಹಲವು ಸಂಘಟನೆಗಳು ಪಟ್ಟು ಹಿಡಿಯಲು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರೇ ಕಾರಣ ಎಂದು ಹೇಳಲಾಗುತ್ತಿದೆ ಇದಕ್ಕೆ ತಮ್ಮ ಅಭಪ್ರಾಯ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಗೌಡರೇ ಅಲ್ಲದೆ ನಮ್ಮ ಪಕ್ಷದ ಯಾವೊಬ್ಬ ಮುಖಂಡರೂ ಕೂಡ ಭಾಗಿಯಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಒಡಕು ಮೂಡಿದ್ದು, ಅಲ್ಲಿನ ನಾಯಕರೇ ವೈಮನಸ್ಸು ಬೆಳೆಸಿಕೊಂಡಿರುವ ಹಿನ್ನೆಲೆಯಲ್ಲಿ ಈ ತರಹದ ಬೆಳವಣಿಗೆಗಳ ಉದ್ಭವಕ್ಕೆ ಕಾರಣವಾಗುತ್ತಿದೆ ಬಿಟ್ಟರೆ ದಲಿತ ಸಂಘಟನೆಗಳಿಗೆ ಸಭೆ ನಡೆಸುವಂತೆ ಅಥವಾ ಸಿಎಂ ಸ್ಥಾನಕ್ಕೆ ಆಗ್ರಹಿಸುವಂತೆ ನಾವು ಕುಮ್ಮಕ್ಕು ನೀಡಿಲ್ಲ ಎಂದಿದ್ದಾರೆ. 
 
15ಕ್ಕೂ ಹೆಚ್ಚು ದಲಿತ ಸಂಘಟನೆಗಳ ಹಲವು ಮುಖಂಡರು ನಿನ್ನೆ ನಗರದ ಏಟ್ರಿಯಾ ಹೋಟೆಲ್‌ನಲ್ಲಿ ಸಭೆ ಸೇರಿ ತಮ್ಮ ದಲಿತ ನಾಯಕ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ರಾಜ್ಯದಲ್ಲಿ ಸಿಎಂ ಸ್ಥಾನ ನೀಡಬೇಕು. ನೀಡಲಿಲ್ಲ ಎಂದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಏಕಿರಬೇಕು ಎಂದು ಮಾಧ್ಯಮಗಳ ಮೂಲಕ ಖಾರವಾಗಿ ಪ್ರತಿಕ್ರಿಯಿಸಿ ಸಿಎಂ ಸಿದ್ದರಾಮಯ್ಯನವರಿಗೆ ಶಾಕ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಹೀಗೆ ಪ್ರಶ್ನಿಸಿವೆ.

Share this Story:

Follow Webdunia kannada