Select Your Language

Notifications

webdunia
webdunia
webdunia
webdunia

ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ತನಿಖೆಗೆ ನೂತನ ಅಧಿಸೂಚನೆ

ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ತನಿಖೆಗೆ ನೂತನ ಅಧಿಸೂಚನೆ
ಬೆಂಗಳೂರು , ಸೋಮವಾರ, 6 ಏಪ್ರಿಲ್ 2015 (16:47 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯು ಸರ್ಕಾರ ರವಾನಿಸಿದ್ದ ಅಧಿಸೂಚನೆಯನ್ನು ವಾಪಾಸ್ ಕಳುಹಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮತ್ತೊಮ್ಮೆ ನೂತನ ಅಧಿಸೂಚನೆ ಹೊರಡಿಸಿ ತನಿಖೆಗೆ ಮನವಿ ಮಾಡಲಾಗುವುದು ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಗಂಭೀರವಾದ ಪ್ರಕರಣ ಎಂಬ ಕಾರಣದಿಂದ ಷರತ್ತು ವಿಧಿಸಲಾಗಿತ್ತು. ಆದರೆ ಸಿಬಿಐ ಅದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೂತನ ಅಧಿಸೂಚನೆ ಹೊರಡಿಸಿ ತನಿಖೆಗೆ ಮನವಿ ಮಾಡಲಾಗುವುದು ಎಂದರು. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೂ ಪ್ರತಿಕ್ರಿಯಿಸಿದ್ದು, ಸಿಬಿಐಗೆ ವಹಿಸಬೇಕೆಂದು ರಾಜ್ಯದ ಎಲ್ಲಾ ವರ್ಗದ ಜನರಿಂದಲೂ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ನಮ್ಮ ಪೊಲೀಸರ ದಕ್ಷತೆಯನ್ನು ಕಡೆಗಣಿಸಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ನಿರ್ಧರಿಸಿದ್ದೆವು. ಆದರೆ ಪ್ರಸ್ತುತ ಸಿಬಿಐ ಷರತ್ತು ಬದ್ಧ ಅಧಿಸೂಚನೆ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ ಎನ್ನುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿ ಕಾಣಿಸುತ್ತಿದೆ ಎಂದ ಅವರು, ತನಿಖೆಗೆ ಅಧಿಕ ಸಮಯ ಬೇಕೆಂದಿದ್ದಲ್ಲಿ ಮತ್ತಷ್ಟು ದಿನಗಳ ಕಾಲಾವಕಾಶ ನೀಡಬೇಕೆಂದು ಕೇಳಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.  
 
ಬಳಿಕ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜಕೀಯ ಲಾಭ ಪಡೆದರು ಎಂದು ಆರೋಪಿಸಿ, ಈ ಹಿಂದೆ ಇತರೆ ಪಕ್ಷಗಳ ಸರ್ಕಾರಗಳಿದ್ದಾಗ ನಾವು ಬಹುಕೋಟಿ ಹಗರಣಗಳಾಗಿ ಕಾಣಿಸಿಕೊಂಡಿದ್ದ ಗಣಿ ಅವ್ಯವಹಾರಗಳನ್ನು ಸಿಬಿಐಗೆ ಒಪ್ಪಿಸಿ ಎಂದು ಎಷ್ಟು ಒತ್ತಾಯಿಸಿದರೂ ಕೂಡ ಸಿಬಿಐಗೆ ವಹಿಸಿರಲಿಲ್ಲ. ಆದರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನಾಲ್ಕು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ ಎನ್ನುವ ಮೂಲಕ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.  
 
ಇನ್ನು ಅಧಿಸೂಚನೆಯಲ್ಲಿ ಷರತ್ತು ವಿಧಿಸಿದ್ದೇಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣವು ಗಂಭೀರವಾದುದಾಗಿದ್ದು, ಆದಷ್ಟು ಬೇಗ ಸತ್ಯಾಂಶ ಹೊರಬರಲಿ ಎಂಬ ಕಾರಣದಿಂದ ಷರತ್ತನ್ನು ವಿಧಿಸಲಾಗಿತ್ತು ಎಂದರು.  
 
ಇನ್ನು ಕೆಲ ವಿಶ್ವಾಸನೀಯ ಮೂಲಗಳ ಪ್ರಕಾರ, ಈಗಾಗಲೇ ಯಾವುದೇ ಷರತ್ತುಗಳಿಲ್ಲದೆ ನೂತನ ಅಧಿಸೂಚನೆಯನ್ನು ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 
 
ರಾಜ್ಯ ಸ್ರಕಾರ ಈ ಹಿಂದೆ ಮಾರ್ಚ್ 24ರಂದು ಸಿಬಿಐ ತನಿಖೆ ನಡೆಸುವಂತೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಸೂಚನೆಯನ್ನು ಸರ್ಕಾರಕ್ಕೇ ಹಿಂದಿರುಗಿಸಿತ್ತು. ಈಗಾಗಲೇ ಸರ್ಕಾರ ಮತ್ತೊಂದು ನೂತನ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ. 

Share this Story:

Follow Webdunia kannada