ಬೆಳಗಾವಿ: ಅಧಿವೇಶನದ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಶಬ್ಧ ಬಳಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಎಂಎಲ್ ಸಿ ಸಿಟಿ ರವಿ ಅವರನ್ನು ಬಂಧಿಸಿದ ಪೊಲೀಸರು ನಡೆದುಕೊಂಡಿರುವ ರೀತಿ ಈಗ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.
ಒಬ್ಬ ವಿಧಾನಪರಿಷತ್ ಸದಸ್ಯನನ್ನು ಈ ರೀತಿ ಏಕಾಏಕಿ ಪೊಲೀಸರು ಬಂಧಿಸುವಂತಿಲ್ಲ. ಅದಕ್ಕೆ ಸ್ಪೀಕರ್ ಒಪ್ಪಿಗೆ ಬೇಕಾಗುತ್ತದೆ. ಆದರೆ ಸಿಟಿ ರವಿಯವರನ್ನು ಏಕಾಏಕಿ ಬಂಧಿಸಿದ ಪೊಲೀಸರು ಖಾನಾಪುರ ಪೊಲೀಸ್ ಠಾಣೆಯಲ್ಲಿ ಮೂರು ಗಂಟೆಗೂ ಅಧಿಕ ಕಾಲ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಅರೆಸ್ಟ್ ಮಾಡುವಾಗ ಕಾರಣವನ್ನೂ ನನಗೆ ನೀಡಿಲ್ಲ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಇನ್ನು ಇಲ್ಲಿಂದ ಎಲ್ಲಿಗೆ ಕರೆದೊಯ್ಯುತ್ತಾರೆ ಎಂಬ ಬಗ್ಗೆಯೂ ನನಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಒಬ್ಬ ಮಾಜಿ ಸಚಿವರೇ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳುತ್ತಿದ್ದರೆ ಈ ರಾಜ್ಯದಲ್ಲಿ ಗೃಹ ಇಲಾಖೆ ತಾಲಿಬಾನಿಗಳ ಕೈಯಲ್ಲಿದೆಯೇ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇನ್ನು ಸಿಟಿ ರವಿ ಬಂಧನ ಖಂಡಿಸಿ ಇಂದು ಬಿಜೆಪಿ ಮತ್ತು ಸಿಟಿ ರವಿ ಬೆಂಬಲಿಗರು ಚಿಕ್ಕಮಗಳೂರು ಬಂದ್ ಗೆ ಕರೆ ನೀಡಿದ್ದಾರೆ.