ಬೆಂಗಳೂರು: ರಾಜ್ಯದಲ್ಲಿ ಕಾಟನ್ ಕ್ಯಾಂಡಿಯನ್ನು ನಿಷೇಧ ಮಾಡಲಾಗಿದೆ. ಗೋಬಿ ಮಂಚೂರಿಗೂ ಕೃತಕ ರಾಸಾಯನಿಕ ಬಳಸದಂತೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುತ್ತೋಲೆ ಹೊರಡಿಸಿದ್ದಾರೆ.
ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಕೃತಕ ರಾಸಾಯನಿಕವಿದೆ ಎಂದು ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಹೀಗಾಗಿ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸದೇ ಮಾರಾಟ ಮಾಡುವಂತೆ ನಿರ್ಬಂಧ ವಿಧಿಸಲಾಗಿದೆ.
ಒಂದು ವೇಳೆ ಈ ನಿಯಾಮಳಿಗಳನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಈ ಆಹಾರಗಳಿಗೆ ಬಳಸುವ ಕೃತಕ ಬಣ್ಣ, ರಾಸಾಯನಿಕಗಳಿಂದ ಕ್ಯಾನ್ಸರ್ ನಂತಹ ಮಾರಕ ರೋಗ ಬರುತ್ತದೆ. ಹೆಚ್ಚು ಕೊಬ್ಬುಕಾರಕ, ಉಪ್ಪು, ಸಕ್ಕರೆ ಅಂಶ ಬಳಕೆಯಾಗುತ್ತಿದೆ. ಸುಮಾರು 171 ಕಡೆ ಗೋಬಿ ಪರೀಕ್ಷಿಸಲಾಗಿದೆ. ಈ ಪೈಕಿ 101 ಕಡೆ ಕೃತಕ ರಾಸಾಯನಿಕ ಬಳಸಿರುವುದು ದೃಢಪಟ್ಟಿದೆ. ಇವು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಸಚಿವರು ಹೇಳಿದ್ದಾರೆ. ಕೃತಕ ಬಣ್ಣ ಬಳಕೆ ಮಾಡಿ ಕಾಟನ್ ಕ್ಯಾಂಡಿ ತಯಾರು ಮಾಡಬಹುದು. ಆದರೆ ರೊಡಮೈನ್ ಬಿ, ಟಾರ್ಟ್ರಾಜಿನ್ ನಂತಹ ಯಾವುದೇ ಬಣ್ಣ ಬಳಕೆ ಮಾಡಿದರೆ 10 ಲಕ್ಷ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.