ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಅನಗತ್ಯ ಮನೆಯಿಂದ ಹೊರಗಡೆ ತಿರುಗಾಡುವುದಾಗಲಿ ಅಥವಾ ದೂರದ ಊರುಗಳಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅನಗತ್ಯ ಪ್ರಯಾಣಗಳಿಗೆ ಬ್ರೆಕ್ ಹಾಕಲು ಜಿಲ್ಲೆಯೊಳಗಿನ ಸಾರಿಗೆ ಸೇವೆ ಕನಿಷ್ಠ ಗೊಳಿಸಲಾಗುವುದು ಎಂದರು.
ಸಾರ್ವಜನಿಕರು “ಕೊರೋನಾ ವೈರಸ್” ಕುರಿತು ಭಯಭೀತರಾಗುವ ಅವಶ್ಯಕತೆ ಇಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅನಿವಾರ್ಯ. “ಕೊರೋನಾ ವೈರಸ್” ಕೇವಲ ಗಾಳಿಯಿಂದ ಹರಡುವ ರೋಗವಲ್ಲ, ಇದು ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಸೊಂಕು ತಗಲುತ್ತದೆ.
ವಿದೇಶದಿಂದ ಮರಳಿರುವ ವ್ಯಕ್ತಿ, ಆ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಕೊರೋನಾ ವೈರಸ್ ಲಕ್ಷಣ ಹೊಂದಿರುವವರನ್ನು ಮಾತ್ರ ಕೊರೋನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಡಿ.ಸಿ. ಶರತ್ ಬಿ. ಮಾಹಿತಿ ನೀಡಿದರು.
ಕೊರೋನಾ ವೈರಸ್ ಕುರಿತಂತೆ ಸಾರ್ವಜನಿಕರಲ್ಲಿ ಮನೆಮಾಡಿರುವ ಭಯದ ವಾತಾವರಣ ತಿಳಿಗೊಳಿಸಲು ಮತ್ತು ಸೊಂಕಿನ ಬಗ್ಗೆ ಅಗತ್ಯ ಮಾಹಿತಿ ಪಡೆಯಲು ಕೂಡಲೆ ಹೆಲ್ಪ್‍ಲೈನ್ ಸೆಂಟರ್ ಪ್ರಾರಂಭಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು ವಿದೇಶದಿಂದ ಜಿಲ್ಲೆಗೆ ಮರಳಿದ ಎಲ್ಲರು ಸಮಾಜದ ಸ್ವಾಸ್ಥ ಹಿತದೃಷ್ಠಿಯಿಂದ ಕೂಡಲೆ ಸ್ವಯಂಪ್ರೇರಿತರಾಗಿ ಚಿಕಿತ್ಸೆಗೆ ಒಳಪಡಿಸಿಕೊಳ್ಳಬೇಕು ಸೂಚನೆ ನೀಡಿದರು.