Select Your Language

Notifications

webdunia
webdunia
webdunia
webdunia

ಪಟ್ಟಾಭಿಷೇಕ ಖಾಸಗಿ ಕಾರ್ಯಕ್ರಮವಾಗಿದೆ: ಸಿದ್ದರಾಮಯ್ಯ

ಪಟ್ಟಾಭಿಷೇಕ ಖಾಸಗಿ ಕಾರ್ಯಕ್ರಮವಾಗಿದೆ: ಸಿದ್ದರಾಮಯ್ಯ
ಬೆಂಗಳೂರು , ಗುರುವಾರ, 28 ಮೇ 2015 (17:09 IST)
ನಮ್ಮ ಸರ್ಕಾರದಲ್ಲಿ ಯಾವುದೇ ಹಗರಣಗಳಾಗಿಲ್ಲ, ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರತಿಕ್ರಿಯಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವು ರಾಜ್ಯದಲ್ಲಿ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದೆ. ಆದರೆ ವಿಪಕ್ಷ ನಾಯಕರು ಅನಗತ್ಯವಾಗಿ ನಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಮ್ಮದು ಹಗರಣ ಹಾಗೂ ಭ್ರಷ್ಟಾಚಾರ ರಹಿತ ಸರ್ಕಾರವಾಗಿದೆ ಎಂದರು. 
 
ಇದೇ ವೇಳೆ, ಒಂದಂಕಿ ಲಾಟರಿ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ವಹಿಸಲಾಗಿದೆ. ಆದರೆ ಕುಮಾರಸ್ವಾಮಿ ಅವರು ಅನಗತ್ಯವಾಗಿ ನಮ್ಮ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಅಲ್ಲದೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ಹಗರಣದಲ್ಲಿ ಮುಳುಗಿದೆ ಎಂದು ದೂರಿದ್ದಾರೆ. ಸರ್ಕಾರದ ವಿರುದ್ಧ ಆರೋಪ ಮಾಡುವ ಇಂತಹವರು ತಮ್ಮ ಬಳಿ ಸೂಕ್ತ ದಾಖಲೆಗಳಿದ್ದಲ್ಲಿ ಅವುಗಳನ್ನು ಬಹಿರಂಗಗೊಳಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಆರೋಪಿಸಿದರು. 
 
ಬಳಿಕ, ಈ ಬಾರಿ ಇಂಜಿನಿಯರಿಂಗ್ ಶುಲ್ಕದಲ್ಲಿ ಹೆಚ್ಚಳವಾಗಿರುವ ಆರೋಪ ಕೇಳಿ ಬಂದಿದೆ. ಆದರೆ ನಮ್ಮ ಸರ್ಕಾರ ಬಡವರ, ದಲಿತರ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಿತ ಕಾಯಲು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ 2006ರ ವೃತ್ತಿಶಿಕ್ಷಣ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು. 
 
ಮೈಸೂರು ರಾಜಮನೆತನದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ. ತಾವು ಏಕೆ ಅಲ್ಲಿಗೆ ತೆರಳಿಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸಂಪುಟದ ಕೆಲವರು ಸದಸ್ಯರು ಈಗಾಗಲೇ ಅರಮನೆಯಲ್ಲಿ ಉಪಸ್ಥಿತಿ ವಹಿಸಿದ್ದಾರೆ. ನಾನೂ ಕೂಡ ಹೋಗುತ್ತಿದ್ದೆ. ಆದರೆ ನನಗೆ ಇಲ್ಲಿ ಹೆಚ್ಚಿನ ಸಭೆಗಳು ನಿಗಧಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹೆಚ್ಚಿನ ಒತ್ತಡ ಇದ್ದ ಕಾರಣ ತೆರಳಲಾಗಲಿಲ್ಲ. ಅಲ್ಲದೆ ಕಾರ್ಯಕ್ರಮವು ರಾಜವಂಶಸ್ಥರ ಖಾಸಗಿ ಕಾರ್ಯಕ್ರಮವಾಗಿದೆ ಎಂದರು.

Share this Story:

Follow Webdunia kannada