ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮುಡಾ ಹಗರಣ ವಿಚಾರವಾಗಿ ಮುಜುಗರವುಂಟು ಮಾಡುತ್ತಿದ್ದರೆ ಇತ್ತ ರಾಜ್ಯ ಸರ್ಕಾರ ಬಿಜೆಪಿ ನಾಯಕರಿಗೆ ಕೊವಿಡ್ ಶಾಕ್ ನೀಡಲು ಮುಂದಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿತ್ತು. ಈ ವೇಳೆ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಈಗಿನ ಕಾಂಗ್ರೆಸ್ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ಸಮಿತಿ ಮಾಡಿ ತನಿಖೆ ನಡೆಸಿತ್ತು.
ಇಂದು ಆ ಸಮಿತಿ ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಿದೆ. ಕೊವಿಡ್ ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದಯಕೀಯ ಶಿಕ್ಷಣ ಇಲಾಖೆ ನಡೆಸಿದ ಔಷಧಿ ಮತ್ತು ವೈದ್ಯಕೀಯ ಉಪಕರಣ ಖರೀದಿ ಲೆಕ್ಕಪತ್ರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನಲೆಯಲ್ಲಿ ಸಿದ್ದು ಸರ್ಕಾರ ಕಳೆದ ಅಕ್ಟೋಬರ್ ನಲ್ಲಿ ತನಿಖೆಗೆ ಆದೇಶಿಸಿತ್ತು. ಈ ತನಿಖಾ ವರದಿಯಲ್ಲಿ ಅವ್ಯವಹಾರ ನಡೆದಿರುವುದು ನಿಜ ಎಂದು ವರದಿ ಬಂದರೆ ಮುಡಾ ಹಗರಣ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಅಸ್ತ್ರ ಪ್ರಯೋಗಿಸುತ್ತಿರುವ ಬಿಜೆಪಿ ನಾಯಕರನ್ನು ತಣ್ಣಗಾಗಿಸಲು ಕಾಂಗ್ರೆಸ್ ಗೆ ಪ್ರಬಲ ಅಸ್ತ್ರ ಸಿಕ್ಕಂತಾಗುತ್ತದೆ.