ಚಿತ್ರದುರ್ಗ: ತಾಲ್ಲೂಕಿನ ಸೀಬಾರ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಗಾತದಲ್ಲಿ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಇಂದು ನಡೆದಿದೆ.
ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಇನ್ನೆರಡು ಲಾರಿಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಆಂಧ್ರಪ್ರದೇಶ, ತಾಡಪತ್ರಿ ಗ್ರಾಮದ ಶೇಖರ್ (55), ತಮಿಳುನಾಡು, ಧರ್ಮಪುರಿಯ ಪೆರಿಯಸ್ವಾಮಿ (50), ಉತ್ತರ ಪ್ರದೇಶ, ಅಲಿಗಡದ ಜಬರುದ್ದೀನ್ (52) ಎಂದು ಗುರುತಿಸಲಾಗಿದೆ.
ಲಾರಿಗಳು ಮುಂಬೈನಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದವು. ಬಟ್ಟೆ ತುಂಬಿದ್ದ ಲಾರಿ ಟೈರ್ ಸ್ಫೋಟಗೊಂಡಿದ್ದರಿಂದ ರಸ್ತೆ ಬದಿಯಲ್ಲಿ ಟೈಯರ್ ಅನ್ನು ಚಾಲಕರು ಬದಲಾವಣೆ ಮಾಡುತ್ತಿದ್ದರು.
ಹಿಂದಿನಿಂದ ಬಂದ ಭತ್ತ ತುಂಬಿದ್ದ ಲಾರಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ. ಭತ್ತ ತುಂಬಿದ್ದ ಲಾರಿಗೆ ಹಿಂದಿನಿಂದ ಬಂದ ಕಲ್ಲಂಗಡಿ ತುಂಬಿದ್ದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೂರೂ ವಾಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟರು.
ಅಪಘಾತದ ನಂತರ ರಸ್ತೆಯಲ್ಲಿ ಬಟ್ಟೆ, ಭತ್ತ, ಕಲ್ಲಂಗಡಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.