ಬೆಂಗಳೂರು : ಚಾಣಕ್ಯ ವಿವಿ ವಿಧೇಯಕವನ್ನು ಚರ್ಚೆಗೆ ಅವಕಾಶ ನೀಡದೆ ತರಾತುರಿಯಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿದೆ. ಚಾಣಕ್ಯ ವಿವಿ ಮನುವಾದಿಗಳ ಯೂನಿವರ್ಸಿಟಿಯಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಣಕ್ಯ ವಿವಿ ಮನುವಾದಿಗಳ ಯೂನಿವರ್ಸಿಟಿಯಾಗಲಿದೆ. ನಾನು ಚಾಣಕ್ಯ ಬಗ್ಗೆ ಹೇಳಲ್ಲ, ಸಂಸ್ಥೆಯ ಬಗ್ಗೆ ಹೇಳುತ್ತಿದ್ದೇನೆ. ಈ ಆರ್ಎಸ್ಎಸ್ನವರು ಮನುವಾದಿಗಳು. ಮತ್ತೆ ಚತುರ್ವರ್ಣ ಜಾರಿ ಮಾಡುವುದಕ್ಕೆ ಹೊರಟಿದ್ದಾರೆ. ಅಂತಹ ಚಾಣಕ್ಯ ವಿವಿ ವಿಧೇಯಕವನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ ಎಂದು ಹೇಳಿದ್ದಾರೆ.
ಚಾಣಕ್ಯ ವಿವಿಯನ್ನು ನಡೆಸುತ್ತಿರುವುದು ಸೆಸ್ ಸಂಸ್ಥೆ. ಸೆಸ್ ಸಂಸ್ಥೆ ನಡೆಸುತ್ತಿರುವವರು ಆರ್ ಎಸ್ಎಸ್ ನವರು. 50 ಕೋಟಿ ರೂಪಾಯಿಗೆ 116 ಎಕರೆ ಭೂಮಿಯನ್ನ ನೀಡಿದ್ದಾರೆ. ಸರ್ಕಾರ ರೈತರಿಗೆ 175 ಕೋಟಿ ರೂಪಾಯಿ ಪರಿಹಾರ ನೀಡಿದೆ. ರೈತರಿಂದ ಸ್ವಾಧೀನಪಡಿಸಿಕೊಂಡು ಭೂಮಿ ಅಭಿವೃದ್ಧಿಪಡಿಸಿದ್ದಾರೆ. ಈ ಭೂಮಿ 300ರಿಂದ 400 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಸರ್ಕಾರ ಈಗ ಸೆಸ್ ಸಂಸ್ಥೆಗೆ ಭೂಮಿಯನ್ನು ನೀಡಿದೆ. ಸೆಸ್ ಸಂಸ್ಥೆಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳೇ ಇಲ್ಲ. ಸೆಸ್ ಸಂಸ್ಥೆಗೆ ಸರ್ಕಾರ ಭೂಮಿ ನೀಡಿರುವುದು ದೊಡ್ಡ ಹಗರಣ ಎಂದು ಸಿದ್ದರಾಮಯ್ಯ ಹೇಳಿದರು.