ರಾಜ್ಯಸಭೆ ಚುನಾವಣೆಗೆ ಮತ ನೀಡಲು ಶಾಸಕರಿಂದ ಕೋಟಿ ಕೋಟಿ ಹಣದ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವ ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್, ಖಾಸಗಿ ವಾಹಿನಿಗಳ ವಿರುದ್ಧ ಕಾನೂನು ಸಮರ ಕೈಗೊಳ್ಳತ್ತೇನೆ ಎಂದು ತಿಳಿಸಿದ್ದಾರೆ.
ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ಬಸವ ಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ್ ಖೂಬಾ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಟಿ.ದೇವೇಗೌಡ ಮತ್ತು ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತುರ್ ಪ್ರಕಾಶ್ ರಾಜ್ಯಸಭೆಗೆ ಚುನಾವಣೆಗೆ ಮತ ನೀಡಲು ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ನಿನ್ನೆ ಖಾಸಗಿ ಸುದ್ದಿ ವಾಹಿನಿ ಸ್ಟಿಂಗ್ ಆಪರೇಶನ್ ಮೂಲಕ ಬಹಿರಂಗ ಪಡಿಸಿತ್ತು.
ಈ ಕುರಿತು ಆರೊಪ ಎದುರಿಸುತ್ತಿರುವ ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಇಂದು ವಿಧಾನ ಸೌಧದ ಬಳಿ ಇರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಬಳಿ ಮೌನ ಪ್ರತಿಭಟನೆ ಕೈಕೊಂಡಿದ್ದರು.
ಪ್ರತಿಭಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಿ.ಆರ್.ಪಾಟೀಲ್, ನಾನು ಜೆ.ಪಿ ಚಳುವಳಿ ಮೂಲಕ ರಾಜಕಾರಣಕ್ಕೆ ಬಂದವನು. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನಾನು ಯಾರ ಯಾರ ಜೊತೆ ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಬಹಿರಂಗ ಪಡಿಸಲಿ. ಈ ಕುರಿತು ಖಾಸಗಿ ವಾಹಿನಿಯವರು ಸಾಕ್ಷಿಗಳನ್ನು ತೆಗೆದುಕೊಂಡು ನನ್ನ ಬಳಿ ಬರಲಿ ಎಂದು ಹೇಳಿದ್ದಾರೆ.
ನನ್ನ ತೇಜೊವಧೆ ಮಾಡಿರುವ ಖಾಸಗಿ ವಾಹಿನಿಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈ ಕುರಿತು ವಕೀಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ