ಕಾರು ಚಾಲಕನ ನಿರ್ಲಕ್ಷ್ಯವೋ..? ಉದ್ದಟತನವೋ..? ಆ ಜೀವ ನಡು ರಸ್ತೆಯಲ್ಲೇ ಒದ್ದಾಡಿ ಉಸಿರು ಚೆಲ್ಲಿದೆ. ಹೌದು, ಬೆಂಗಳೂರಿ ಜ್ಞಾನಭಾರತಿಯಲ್ಲಿ ಕಾರು ಹತ್ತಿಸಿದ್ದರಿಂದ ರಸ್ತೆ ದಾಟುತ್ತಿದ್ದ ಬೀದಿ ನಾಯಿ ಸಾವಿಗೀಡಾದ ಅಮಾನವೀಯ ಘಟನೆ ನಡೆದಿದೆ.
ಏಪ್ರಿಲ್ 19, ಬೆಳಗ್ಗೆ 9 ಗಂಟೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಸರ್ ಎಂವಿ ಲೇಔಟ್ ನ ಮೊದಲ ಬ್ಲಾಕ್ ನಲ್ಲಿ ಬೀದಿ ನಾಯಿ ಮೇಲೆ ಕಾರು ಚಾಲಕನೊಬ್ಬ ಕಾರು ಹರಿಸಿ ಪರಾರಿಯಾಗಿದ್ದಾನೆ.
ಕಾರು ಮೈಮೇಲೆ ಹರಿದಿದ್ದರಿಂದ ಮೂಕಪ್ರಾಣಿ ನೋವಿನೊಂದಿಗೆ ವಿಲವಿಲ ಒದ್ದಾಡಿ ಪ್ರಾಣ ಚೆಲ್ಲಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ಭೀಕರ ಘಟನೆ ಮನಕಲಕುವಂತಿದೆ. ಹೌದು, ಆ ಕಾರು ಚಾಲಕ ಒಂದು ಕ್ಷಣ ಕಾರು ನಿಲ್ಲಿಸಿ ಬಿಟ್ಟಿದ್ದರೆ ಆ ಜೀವ ಬದುಕುಳಿಯುತ್ತಿತ್ತು. ಆದರೆ ಕಾರು ಚಾಲಕನ ಅಸಡ್ಡೆಗೆ ಬೀದಿ ನಾಯಿ ಬಲಿಯಾಗಿದೆ.
ಈ ಘಟನೆ ನಡೆಯುವ ವೇಳೆ ಯಶು ಎಂಬ ಯುವಕ ಅಲ್ಲೇ ಪಕ್ಕದಲ್ಲಿದ್ದ. ಕಾರಿನ ಗಾಲಿಗೆ ಸಿಲುಕಿ ಒದ್ದಾಡುತ್ತಿದ್ದ ನಾಯಿಗೆ ತಕ್ಷಣವೇ ನೀರು ಕುಡಿಸಿ, ಬದುಕಿಸುವ ಪ್ರಯತ್ನ ಮಾಡಿದ್ದರೂ ಕೂಡ ಜೀವ ಉಳಿಯಲಿಲ್ಲ. ಅಲ್ಲೇ ಪಕ್ಕದಲ್ಲಿ ಜನರಲ್ ಸ್ಟೋರ್ ಇಟ್ಟುಕೊಂಡಿರುವ ಯಶ್ ಅಂಗಡಿಗೆ ಪ್ರತಿ ದಿನ ಈ ನಾಯಿ ಹೋಗುತ್ತಿತ್ತು. ಇದನ್ನು ನೆನೆಸಿಕೊಂಡು ಸಂಕಟಪಟ್ಟ ಯಶು, ಪ್ರತಿ ದಿನ ಈ ನಾಯಿಗೆ ಊಟ ಕೊಡುತ್ತಿದ್ದೆವು. ಕಾರು ಚಾಲಕ ಮನಸ್ಸು ಮಾಡಿದ್ದರೆ ನಾಯಿ ಬದುಕುಳಿಯುತ್ತಿತ್ತು ಎಂದಿದ್ದಾನೆ.
ಘಟನೆ ನಡೆದ ದಿನ ಸಂಜೆ ರಾಮಚಂದ್ರ ಭಟ್ಟ ಎಂಬವರಿಗೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡು ಸಿಸಿಟಿವಿ ರಿಕವರಿ ಮಾಡಿಕೊಂಡಿದ್ದಾರೆ. ಸಿಸಿಟಿವಿ ಆಧರಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಮುಂದಾಗಿದ್ದಾರೆ. ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಂತೆ. ಬಳಿಕ ಪ್ರಾಣಿ ಸಂಘದ ಸಹಾಯದಿಂದ ದೂರು ದಾಖಲಿಸಿ FIR ದಾಖಲಿಸಿದ್ದಾರೆ. ಅಲ್ಲದೆ ಕಾರು ಸೀಜ್ ಮಾಡುವುದಲ್ಲದೆ, ಕಾರು ಚಾಲಕನ ಲೈಸೆನ್ಸ್ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.
ಈ ಹಿಂದೆಯೂ ರಾಜಧಾನಿ ಬೆಂಗಳೂರಿನಲ್ಲಿ ಇಂಥಾ ಹಲವು ಘಟನೆಗಳು ನಡೆದಿವೆ. ಬೀದಿ ನಾಯಿಗಳ ಮೇಲೆ ಏಕಾಏಕಿ ಕಾರು ಚಲಾಯಿಸಿ ಕೊಂದವರಿದ್ದಾರೆ. ಈಗ ಅದು ಮುಂದುವರೆದಿದೆ. ಇಲ್ಲಿ ನಮ್ಮಂಥೆ ಮೂಕಪ್ರಾಣಿಗಳೂ ಬದುಕುವ ಹಕ್ಕಿದೆ. ಅದನ್ನು ಕಾರು ಚಾಲಕರು ಗಮನದಲ್ಲಿಟ್ಟುಕೊಂಡು ಕಾರು ಚಲಾಯಿಸಿದರೆ ಬಡ ಜೀವಗಳು ಬಾಳಿ ಬದುಕುತ್ತದೆ.