ಬೆಂಗಳೂರು: ರಾಜ್ಯ ಬಿಜೆಪಿ ಈಗ ಒಡೆದ ಮನೆಯಂತಾಗಿರುವುದು ಗೊತ್ತಿರದ ವಿಚಾರವೇನೂ ಅಲ್ಲ. ಇದೀಗ ಬಂಡಾಯ ನಾಯಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಡಿದ್ದಾರೆ.
ಟ್ವೀಟ್ ಮೂಲಕ ಬಂಡಾಯ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಯಾರೇ ನಾಯಕರು, ಸಂಘಟನೆಗಳು ಪ್ರತ್ಯೇಕ ಸಭೆ, ಸಮಾವೇಶ ಕರೆಯಲು ಉದ್ದೇಶಿಸಿದ್ದರೆ ತಕ್ಷಣವೇ ಅದನ್ನು ಹಿಂಪಡೆಯಿರಿ. ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶವಿಲ್ಲ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
‘ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಯಾರೇ ಮಾಡಲು ಹೊರಟಿದ್ದರೂ ಕೂಡಲೇ ತಮ್ಮ ಚಟವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ. ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಕಾರ್ಯಕ್ರಮದಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲಾ ಹಿರಿಯರೊಂದಿಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲಿದ್ದೇನೆ.
ಭಾರತೀಯ ಜನತಾ ಪಾರ್ಟಿ ಕೂಡು ಕುಟಂಬವಿದ್ದಂತೆ. ಪಕ್ಷದ ಚೌಕಟ್ಟಿನಲ್ಲೇ ಪ್ರತಿಯೊಂದು ಸಭೆ, ಸಮಾವೇಶಗಳು ನಡೆಯಬೇಕೇ ಹೊರತು ಪಕ್ಷದ ನಿಯಮ, ಧ್ಯೇಯಗಳನ್ನು ಬದಿಗೆ ಸರಿಸಿ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಸಂಘಟನೆಯ ಆಶಯಕ್ಕೆ ಪೂರಕವಾಗಿಲ್ಲದಿರುವುದನ್ನು ವಿನಮ್ರತೆಯಿಂದ ಸಹೃದಯರಲ್ಲಿ ತಿಳಿಯಪಡಿಸುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.