Webdunia - Bharat's app for daily news and videos

Install App

ಕದನವಿರಾಮ ತೀರ್ಮಾನ ಟ್ರಂಪ್ ತೆಗೆದುಕೊಳ್ಳುತ್ತಿರುವುದು ನಮಗೆ ಅವಮಾನ: ಬಿಕೆ ಹರಿಪ್ರಸಾದ್

Krishnaveni K
ಮಂಗಳವಾರ, 13 ಮೇ 2025 (10:08 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮವಾಗಬೇಕೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀರ್ಮಾನ ಮಾಡುತ್ತಿರುವುದು ದೇಶಕ್ಕೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ಟೀಕಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ನಾನೇ ಕದನವಿರಾಮ ಮಾಡುವಂತೆ ಮನವೊಲಿಸಿದ್ದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋದಲ್ಲೆಲ್ಲಾ ಹೇಳಿಕೊಂಡು ತಿರುಗಡುತ್ತಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯುದ್ದ ಮಾಡಬೇಕೆ ಬೇಡವೇ ಹೀಗೆ ದೇಶದ ತೀರ್ಮಾನಗಳನ್ನು ಟ್ರಂಪ್ ಮಾಡುತ್ತಾರೆ ಎಂದಾದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಜೊತೆಗೆ ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಕೆಲಸ.‌

ಕದನ ವಿರಾಮ ತೆಗೆದುಕೊಂಡ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಬೇಕಿದೆ. ಭಯೋತ್ಪಾದಕ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಬೆಂಬಲ ನೀಡಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ತೀರ್ಮಾನ ಮಾಡಿತ್ತು. ದಾಳಿ ನಡೆಸಿದ ಭಯೋತ್ಪಾದಕರು ಎಲ್ಲಿಗೆ ಹೋದರು ಎನ್ನುವ ಮಾಹಿತಿಯೂ ದೊರೆತಿಲ್ಲ ಎಂದು ಟೀಕಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಜಂಟಿ ಸದನವನ್ನು ಕರೆದು ಈ ಪಾಕಿಸ್ತಾನದ ದಾಳಿ ವಿಚಾರದ ಬಗ್ಗೆ ಚರ್ಚೆ ನಡೆಸುವಂತೆ ತಿಳಿಸಿದರು. ಈ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಯುದ್ಧವನ್ನು ಮಾಡುವ ಮೊದಲು ಎಲ್ಲಾ ಪಕ್ಷಗಳ ಅಭಿಪ್ರಾಯ ಪಡೆಯಲಿಲ್ಲ. ಜೊತೆಗೆ ಸರ್ವ ಪಕ್ಷ ಸಭೆಗೆ ಪ್ರಧಾನಿಯವರು ಗೈರು ಹಾಜರಾಗಿದ್ದರು.

ಪ್ರಧಾನಿಯವರು ಪೆಹಲ್ಗಾಮ ದಾಳಿ ಆದ ನಂತರ ಬಿಹಾರಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು, ಕೇರಳಕ್ಕೆ ಹೋಗಿದ್ದರು. ಇದನ್ನು ನೋಡಿದಾಗ ಅವರಿಗೆ ಯಾವುದು ಮುಖ್ಯ ಎಂಬುದು ಗೊತ್ತಾಗುತ್ತದೆ. ಸರ್ವಪಕ್ಷ ಸಭೆ ನಡೆದಾಗ ಪ್ರಧಾನಿಗಳು ಸಂದೇಶ ನೀಡಬೇಕು ಆದರೆ ಅವರು ನೀಡುತ್ತಾರೆಯೇ ಗೊತ್ತಿಲ್ಲ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

1982 ಜುಲೈ 2 ರಂದು ಇಂದಿರಾಗಾಂಧಿ ಅವರು ಪಾಕಿಸ್ತಾನದ ಪ್ರಧಾನಿ ಬುಟ್ಟೋ ಅವರೊಂದಿಗೆ ಶಿಮ್ಲಾ ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದ ಪ್ರಕಾರ ಈ ಎರಡು ರಾಷ್ಟ್ರಗಳ ಸಮಸ್ಯೆಗಳಿಗೆ ಯಾವುದೇ ಮೂರನೇ ರಾಷ್ಟ್ರ ತಲೆ ಹಾಕಬಾರದು ಎಂದು ಹೇಳಲಾಗಿತ್ತು. ಆದರೆ ಏನಾಯಿತು? ಎಂದು ಪ್ರಶ್ನಿಸಿದರು.

ಮಾನ್ಯ ಪ್ರಧಾನಿ ಮೋದಿಯವರು ವಿಶ್ವಗುರು ಎಂದು ಓಡಾಡುತ್ತಿದ್ದರು. ಆದರೆ ಟ್ರಂಪ್ ವಿಶ್ವಗುರುವಾಗಿ ಹೊರಹೊಮ್ಮಿದ್ದಾರೆ. ಈ ಟ್ರಂಪ್ ಹೇಳಿದಂತೆ ಯಾರ ಬಳಿ ತೈಲ ಖರೀದಿ‌ಮಾಡಬೇಕು, ಯಾರ ಬಳಿ ಫೈಟರ್ ಜೆಟ್ ಖರೀದಿ ಮಾಡಬೇಕು. ಯಾವ ಟ್ಯಾರಿಫ್ ಹಾಕಬೇಕು, ಟೆಸ್ಲಾ ಭಾರತಕ್ಕೆ ಬರಬೇಕೆ ಬೇಡವೇ ಎಂದು ಯಾರು ನಿರ್ಧಾರ ಮಾಡಬೇಕು ಎಂಬುದನ್ನು ಟ್ರಂಪ್ ಕೈಗೆ ಕೊಟ್ಟಂತಿದೆ ಎಂದು ವ್ಯಂಗ್ಯ ಮಾಡಿದರು.

ಐಎಂಎಫ್ ಅವರು ಪಾಕಿಸ್ತಾನಕ್ಕೆ 1.2 ಬಿಲಿಯನ್ ಸಾಲ‌ ನೀಡುತ್ತಾರೆ. ಇದನ್ನು ದೇಶದಿಂದ ನಿಲ್ಲಿಸಲು ಸಹ ಆಗಲಿಲ್ಲ. ನಮ್ಮ ಪರವಾಗಿ ಇದ್ದಂತಹ ಟರ್ಕಿ, ಇರಾನ್,‌ ಸೌಧಿ ಅರೇಬಿಯಾ ದೇಶಗಳು ನಮ್ಮ‌ ಪರವಾಗಿ ಮಾತನಾಡದೇ ಇದ್ದಿದ್ದು ನೋಡಿದರೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. 

ಅಮೇರಿಕಾದ ‌ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳುತ್ತಾರೆ. 'ನಿರಂತರ 48 ಗಂಟೆಗಳ ಕಾಲ ಪಾಕಿಸ್ತಾನ ಹಾಗೂ ಭಾರತದ ನಡುವೆ ಮಾತುಕತೆ ನಡೆಸಿ ಈ ಕದನ ವಿರಾಮಕ್ಕೆ ಹೆಜ್ಜೆ ಇಡಲಾಗಿದೆ. ಪಾಕಿಸ್ತಾನದ ಪ್ರಧಾನಿ ಶಹಬಾದ್ ಷರೀಫ್, ವಿದೇಶಾಂಗ ಸಚಿವ ಅಸೀಮ್ ಮುನೀರ್, ದೇಶದ ಪ್ರಧಾನಿ ನರೇಂದ ಮೋದಿ, ವಿದೇಶಾಂಗ ಸಚಿವ ಜೈ ಶಂಕರ್ ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ‌. ಇದು ದೇಶದ ಗೌರವ ಉಳಿಸುವ ಮಾದರಿಯೇ? ಈ ಬಿಜೆಪಿ ಕೇಂದ್ರ ಕಚೇರಿಯವರು ಕದನ ವಿರಾಮ ಒಪ್ಪಂದವಲ್ಲವಂತೆ ಇದು ಹೊಂದಾಣಿಕೆಯಂತೆ. ದೇಶದ ಜೊತೆ ಸೈನಿಕರ ಜೊತೆ ನಾವಿದ್ದೇವೆ ಎಂದು ಹೇಳಿ ಈ ಹಂತಕ್ಕೆ ಹೋಗುವುದು ಸರಿಯೇ? ಏ.22 ರಂದು ಪೆಹಲ್ಗಾಮ್ ಘಟನೆ ನಡೆದ ನಂತರ ಹತ್ತು ದಿನಗಳ ಕಾಲ ಏನು ನಡೆಯಿತು ಎಂದು ಯಾರಿಗೂ ತಿಳಿದಿಲ್ಲ ಎಂದಿದ್ದಾರೆ.

 
ಕದನ ವಿರಾಮ ತಂತ್ರವಿರಬಹುದಲ್ಲವೇ ಎಂದು ಕೇಳಿದಾಗ, "ಸಮಸ್ಯೆ ಇರುವದು ಪಾಕಿಸ್ತಾನ ಮತ್ತು ಭಾರತದ ನಡುವೆ. ಇದನ್ನು ಇನ್ನೊಬ್ಬರು ಬಗೆಹರಿಸಬೇಕೆ. ಶಿಮ್ಲಾ ಒಪ್ಪಂದದ ಪ್ರಕಾರ ಯು ಎನ್ ಓ ಸಹ ಮೂಗು ತೂರಿಸುವಂತಿಲ್ಲ ಎಂದು ಒಪ್ಪಂದವಾಗಿದೆ. ಸರ್ವ ಪಕ್ಷ ಸಭೆ ಕರೆದು ಈ ತೀರ್ಮಾನ ಪಡೆದುಕೊಳ್ಳಬೇಕಿತ್ತು. ಆದರೂ ಏಕೆ ಮೂಗು ತೂರಿಸಲು ಅವಕಾಶ ನೀಡಿದಿರಿ ಎಂದು ಪ್ರಶ್ನೆ ಮಾಡುತ್ತಿದ್ದೇನೆ. ವಿದೇಶಾಂಗ ನೀತಿಯಲ್ಲಿ ಮೋದಿಯವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯಾರ ಒತ್ತಡಕ್ಕೆ ಒಳಗಾಗಿ ಹೀಗಾಗಿದ್ದಾರೆ ಎಂದು ಮೋದಿ ಅವರು ಹೇಳಬೇಕು.

ಯುದ್ದದ ಸಿದ್ಧತೆ ಇರಲಿಲ್ಲವೇ ಎಂದಾಗ, "ಯುದ್ದಕ್ಕೆ ಮೊದಲು ಮೂರು ದಿನ ಹೇಳಿದರೆ ಆರ್ ಎಸ್ ಎಸ್ ಅವರು ತಯಾರಾಗುತ್ತೇವೆ ಎಂದಿದ್ದರು ಆದರೂ ಏಕೆ ಯುದ್ದ ನಿಲ್ಲಿಸಿದರೋ ಗೊತ್ತಿಲ್ಲ" ಎಂದರು.

ಯುದ್ಧ ವಿರಾಮದಿಂದ ಕಾಶ್ಮೀರದವರು ಬೇಸರವಾಗಿದ್ದಾರೆಯೇ, "ಇಡೀ ದೇಶವೇ ಬೇಸರವಾಗಿದೆ. ಪಾಕಿಸ್ತಾನದವರು ಭಾರತದ ಕಡೆ ಕಣ್ಣೆತ್ತಿ ಮಾಡದಂತೆ ಆಗುತ್ತದೆ ಎಂದು ದೇಶದ ನಿವಾಸಿಗಳು ಕಾದಿದ್ದರು. ಆದರೆ ಈಗ ಏಕೆ ಈ ರೀತಿಯಾಗಿದೆ ಎಂದು ಮೋದಿ ಅವರು ಉತ್ತರಿಸಬೇಕು. ಕೂಡಲೇ ಜಂಟಿ‌ಸದನ ಕರೆದು ಮಾತನಾಡಬೇಕು" ಎಂದರು.

ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಅವಕಾಶ ನಮಗಿತ್ತು. ಆದರೆ ಅದು ಈಗ ಕೈ ತಪ್ಪಿ ಹೋಗಿದೆ. ಪಿಓಕೆ ವಶಪಡಿಸಿಕೊಳ್ಳುತ್ತೇವೆ ಎಂದಿದ್ದರು. ಈಗ ಆಸೆಗೆ ತಣ್ಣೀರು ಎರಚಿದಂತಾಗಿದೆ. ಮೂರನೆಯರು ತಲೆಹಾಕುವಂತಹ ದುರ್ಬಲರು ನಾವಲ್ಲ. ದೇಶದ ಐಕ್ಯತೆ, ಸಮಗ್ರತೆ ಮುಖ್ಯ" ಎಂದರು.

ದೇಶದ ಜನರ ಪ್ರಾಣ, ಆಸ್ತಿಗಳನ್ನು ತಮ್ಮ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿ ಹುತಾತ್ಮರಾದಂತಹ ವೀರ ಯೋಧರಿಗೆ ಪಕ್ಷದ ಹಾಗೂ ವೈಯಕ್ತಿಕವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಇವರ ಕುಟುಂಬಸ್ಥರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥನೆ ಮಾಡುತ್ತೇನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Nelamangala Fire accident: ಹೊತ್ತಿ ಉರಿದ ಎಣ್ಣೆ ಗೋದಾಮು ವಿಡಿಯೋ

Karnataka Weather: ಇಂದಿನಿಂದ ಬಹುತೇಕ ಜಿಲ್ಲೆಗಳಿಗೆ ಮಳೆ

Donald Trump: ಭಾರತ ಪಾಕಿಸ್ತಾನ ಕದನ ವಿರಾಮ: ಡೊನಾಲ್ಡ್ ಟ್ರಂಪ್ ನಿಂದ ಕೇಂದ್ರ ಸರ್ಕಾರಕ್ಕೆ ಇಕ್ಕಟ್ಟು

ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ: ಭಾರತದ ತಾಕತ್ತು ಜಗತ್ತಿಗೆ ಗೊತ್ತಾಯಿತು ಎಂದ ಪ್ರಧಾನಿ ಮೋದಿ

PM Modi: ಪ್ರಧಾನಿ ಮೋದಿ ಭಾಷಣ ಕನ್ನಡದಲ್ಲಿ ಸಂಪೂರ್ಣವಾಗಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments