Select Your Language

Notifications

webdunia
webdunia
webdunia
webdunia

ಅಕ್ರಮ ಅದಿರು ಸಾಗಣೆ ಪ್ರಕರಣ: ಆನಂದ್ ಸಿಂಗ್‌ಗೆ ಜಾಮೀನು

ಅಕ್ರಮ ಅದಿರು ಸಾಗಣೆ ಪ್ರಕರಣ: ಆನಂದ್ ಸಿಂಗ್‌ಗೆ ಜಾಮೀನು
ಬೆಂಗಳೂರು , ಶುಕ್ರವಾರ, 17 ಏಪ್ರಿಲ್ 2015 (12:26 IST)
ಬೇಲೆಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದು 6 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಲೋಕಾಯುಕ್ತ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
 

 
ವಿಜಯನಗರದ ಶಾಸಕರಾಗಿರುವ ಸಿಂಗ್ ಅವರಿಗೆ ಇಬ್ಬರ ಶ್ಯೂರಿಟಿ ಮತ್ತು 5 ಲಕ್ಷ ರೂಪಾಯಿ ಬಾಂಡ್ ಮೇರೆಗೆ ಜಾಮೀನು ನೀಡಲಾಗಿದೆ. ಜತೆಗೆ ಸಾಕ್ಷಿ ನಾಶ ಮಾಡುವಂತಿಲ್ಲ , ದೇಶ ಬಿಟ್ಟು ಹೋಗುವಂತಿಲ್ಲ ಮತ್ತು ವಿಚಾರಣೆಗೆ ಕರೆದ ಸಂದರ್ಭದಲ್ಲಿ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿದೆ. 
 
ಬಿಡುಗಡೆಯಾದ ಬಳಿಕ ಆನಂದ ಸಿಂಗ್ ಸ್ಪೀಕರ್ ಬಳಿ ತೆರಳಿ  ಅಧಿಕೃತವಾಗಿ ರಾಜೀನಾಮೆಯನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ. 
 
ಬಂಧನದಲ್ಲಿ ಇದ್ದುಕೊಂಡು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿರುವ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ಮೂಲಕ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದರು.ಆದರೆ ಆನಂದ್‌ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಬೇರೆಯವರ ಮೂಲಕ ಸಲ್ಲಿಸಿರುವುದರಿಂದ ಖುದ್ದು ಹಾಜರಾಗಿ ಸ್ಪಷ್ಟನೆ ನೀಡುವಂತೆ ಕಾಗೋಡು ತಿಮ್ಮಪ್ಪ ತಿಳಿಸಿದ್ದರು.
 
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು 2013ರ ಅಕ್ಟೋಬರ್‌ನಲ್ಲಿ ಬಂಧಿಸಿದ್ದರು. ಆದರೆ 2015ರ ಜನವರಿಯಲ್ಲಿ ಅವರು ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಅಕ್ರಮ ಗಣಿಗಾರಿಕೆ, ಅದಿರು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಬಾಕಿ ಇದ್ದ ಪ್ರಕರಣಗಳ ಬಗ್ಗೆ ಲೋಕಾಯುಕ್ತ ವಿಶೇಷ ತನಿಖಾ ದಳ ದಾಖಲಿಸಿದ ಹೊಸ ಪ್ರಕರಣದಲ್ಲಿ ಆನಂದ್‌ ಸಿಂಗ್‌ ಅವರನ್ನು ಕಳೆದ ವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು.

Share this Story:

Follow Webdunia kannada