Select Your Language

Notifications

webdunia
webdunia
webdunia
webdunia

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯಿಂದ ಅಡ್ವಾಣಿಗೆ ಅವಮಾನ: ಕಾರ್ಯಕರ್ತರ ಆಕ್ರೋಶ

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯಿಂದ ಅಡ್ವಾಣಿಗೆ ಅವಮಾನ: ಕಾರ್ಯಕರ್ತರ ಆಕ್ರೋಶ
ಬೆಂಗಳೂರು , ಶುಕ್ರವಾರ, 3 ಏಪ್ರಿಲ್ 2015 (13:14 IST)
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಮೋದಿ ಅಪಮಾನ ಎಸಗಿದ್ದು, ಪಕ್ಷದಲ್ಲಿ ಇನ್ನೂ ಮುನಿಸಿನ ವಾತಾವರಣವಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.  
 
ಹೌದು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಗರದ ಅಶೋಕ ಹೋಟೆಲ್‌ನಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಸಭೆ ನಡೆಯಲಿದೆ. ಮೊದಲ ದಿನವಾದ ಇಂದು ಕಾರ್ಯಕಾರಿಣಿ ಆರಂಭವಾಗಿದ್ದು, ಆರಂಭ ವೇಳೆಯಲ್ಲಿ ಮಾಜಿ ಗೃಹ ಸಚಿವ, ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಮೋದಿ ಅಪಮಾನ ಮಾಡಿರುವುದು ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 
 
ಘಟನೆ ವಿವರ: ಸಭೆ ಆರಂಭವಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಸೇರಿದಂತೆ ಪಕ್ಷದ ಇತರೆ ಹಿರಿಯ ಮುಖಂಡರು ವೇದಿಕೆಗೆ ಆಗಮಿಸುತ್ತಿದ್ದರು. ಈ ವೇಳೆ ವೇದಿಕೆಗೆ ಆಗಮಿಸಿದ ಅಡ್ವಾಣಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಪಕ್ಕದ ಆಸನ ಖಾಲಿ ಇದ್ದ ಕಾರಣ ಅದೇ ಆಸನದ ಮೇಲೆ  ಕುಳಿತುಕೊಳ್ಳಲು ಅಡ್ವಾಣಿ ಮುಂದಾದರು. ಇದನ್ನು ಗಮನಿಸಿದ ಪ್ರಧಾನಿ, ಮುಖವನ್ನೂ ನೋಡದೆ ಅತ್ತ ಕಡೆ ನಡೆಯುವಂತೆ ಕೈ ಮೂಲಕ ದಿಕ್ಕು ತೋರಿಸಿ ಪಕ್ಷದ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಅವರ ಪಕ್ಕದಲ್ಲಿ ಆಸೀನರಾಗುವಂತೆ ಸೂಚಿಸಿದರು. ಇದರಿಂದ ಬೇಸಗೊಂಡ ಹಿರಿಯ ನಾಯಕ ಅಡ್ವಾಣಿ, ಅಮಿತ್ ಶಾ ಪಕ್ಕದ ಆಸನದಲ್ಲಿ ಕುಳಿತರು. 
 
ಈ ಎಲ್ಲಾ ಸನ್ನಿವೇಶಗಳೂ ಕೂಡ ಮಾಧ್ಯಮದ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಇದನ್ನು ಕಂಡ ಸಾರ್ವಜನಿಕರು ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಅಡ್ವಾಣಿ ಕುಳಿತುಕೊಳ್ಳುವಲ್ಲಿ ತಪ್ಪೇನು, ಸಭೆಯಲ್ಲಿ ಹೀಗೆಯೇ ಕುಳಿತುಕೊಳ್ಳಬೇಕು ಎಂದಿದ್ದಲ್ಲಿ ಹಿರಿಯ ನಾಯಕರಾದ ಅವರನ್ನು ಕೈ ಹಿಡಿದು ಆಸನದ ಬಳಿ ಬಿಡಬಹುದಿತ್ತಲ್ಲವೇ ಅಥವಾ ನಾನು ಪ್ರಧಾನಿ ಎಂದಾದರೆ ಮುಖವನ್ನಾದರೂ ಒಮ್ಮೆ ನೋಡಿ ಸೂಚಿಸಬಹುದಿತ್ತಲ್ಲವೇ, ಇದನ್ನು ಬಿಟ್ಟು ಮುಖವನ್ನೂ ನೋಡದೆ ಕೇವಲ ಕೈ ಸನ್ನೆಯ ಮೂಲಕ ಆಸನ ವ್ಯವಸ್ಥೆ ಮಾಡಿದ ಪ್ರಧಾನಿ ಮೋದಿ ಅವರ ವರ್ತನೆಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದು, ಇದು ಪ್ರಧಾನಿ ಮೋದಿ ಅವರು ಪಕ್ಷದ ಹಾಗೂ ಸರ್ಕಾರದ ಹಿರಿಯ ನಾಯಕರಿಗೆ ಎಸಗಿದ ಅಪಮಾನ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.   
 
ಸಭೆಗೆ ಪಕ್ಷದ ಈ ರಾಷ್ಟ್ರೀಯ ಕಾರ್ಯಕಾರಿಣಿಯು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದರೂ ಕೂಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. 
 
ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು ಸೇರಿದಂತೆ ರಾಜ್ಯದ ಮಾಜಿ ಹಾಗೂ ಹಾಲಿ ಸಚಿವರು ಮತ್ತು ಸಂಸದರು ಭಾಗಿಯಾಗಿದ್ದರು. 
 
ಸಭೆಯು ದಕ್ಷಿಣ ಭಾರತದಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂಬ ಮನೋಭಾವದಿಂದಲೇ ಆಯೋಜಿಸಲಾಗಿದ್ದು, ಸರ್ಕಾರದ 10 ತಿಂಗಳ ಅವಧಿಯಲ್ಲಾದ ಆಡಳಿತ, ಯೋಜನೆಗಳು ಸುಧಾರಣೆಗಳು, ಪಕ್ಷದ ಭವಿಷ್ಯದ ನಿಲುವುಗಳು ಸೇರಿದಂತೆ ಇನ್ನಿತರೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎನ್ನಲಾಗಿದೆ. 
 
ಪ್ರಧಾನಿ ಮೋದಿ ಅವರು ಇಂದು ಸಂಜೆ ರಾಜ್ಯದ ಮಾಜಿ ಹಾಗೂ ಹಾಲಿ ಸಂಸದರು, ಶಾಸಕರ ಜೊತೆ ಭೋಜನ ಸವಿಯಲಿದ್ದು, ಇದೇ ಸಂಧರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada