ಬೆಂಗಳೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಲಾದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ಸಂಬಂಧ ದೂರುದಾರರೂ ಆದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು, ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಶುಕ್ರವಾರ ಧಾರವಾಡ ಪೀಠದಿಂದ ಪ್ರಕಟಿಸಿದರು.
ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಪ್ರಕರಣದ ಮೂಲ ದೂರದಾರ ಹಾಗೂ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಜ. 27ರಂದು ಪೂರ್ಣಗೊಳಿಸಿ ಕಾದಿರಿಸಿರುವ ತೀರ್ಪನ್ನು ಇಂದು ಪ್ರಕಟಿಸಿದೆ.
ಮುಡಾ ನಿವೇಶನ ಹಂಚಿಕೆ ಅಕ್ರಮದ ಪ್ರಕರಣದ ಅಭಿಯೋಜನೆ ಮತ್ತು ಪೊಲೀಸ್ ತನಿಖೆಗೆ ರಾಜ್ಯಪಾಲರು ನೀಡಿದ್ದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ಗೆ 2024ರ ಆ.19ರಂದು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠವು 2024ರ ಸೆ. 24ರಂದು ಆದೇಶಿಸಿತ್ತು. ಈ ತೀರ್ಪಿನಲ್ಲಿ ಪ್ರಕರಣದ ತನಿಖೆ ನಡೆಯುವುದು ಅತ್ಯಗತ್ಯವಿದೆ ಎಂದು ಹೇಳಿತ್ತು.