ನವದೆಹಲಿ: 2ವಾರ ತಹಶೀಲ್ದಾರ್ ಸಮನ್ಸ್‌ಗೆ ಸುಪ್ರೀಂ ತಡೆ ನೀಡುವ ಮೂಲಕ ಕೇತಗಾನಹಳ್ಳಿ ಭೂಒತ್ತುವರಿ ಆರೋಪ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ತನಿಖೆ ಮುಂದುವರಿಸಲು ತಹಶೀಲ್ದಾರ್ ಅವರಿಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲ ತಡೆಹಿಡಿದಿದೆ.
ಸೆಪ್ಟೆಂಬರ್ 8 ರಂದು ವಿಭಾಗೀಯ ಪೀಠ ನೀಡಿದ ಆದೇಶ ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಮತ್ತು ನ್ಯಾಯಮೂರ್ತಿ ಪ್ರಸನ್ನ ವರಾಲೆ ಅವರಿದ್ದ ನ್ಯಾಯಪೀಠವು ನಡೆಸಿತು.
ಹಿರಿಯ ವಕೀಲರಾದ ಆರ್ಯಮ ಸುಂದರಂ, ಬಾಲಾಜಿ ಶ್ರೀನಿವಾಸನ್ ಮತ್ತು ಶ್ರೀ ನಿಶಾಂತ್ ಎ.ವಿ. ಕುಮಾರಸ್ವಾಮಿ ಅವರ ಪರವಾಗಿ ಹಾಜರಾಗಿ ವಾದ ಮಂಡನೆ ಮಾಡಿದರು.
ರಾಮನಗರ ಜಿಲ್ಲೆಯಲ್ಲಿಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ಸರಕಾರಿ ಭೂಮಿ ಒತ್ತುವರಿ ಮಾಡಿದ್ದಾರೆಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿಯ ಸಂಬಂಧ ಕರ್ನಾಟಕ ಲೋಕಾಯುಕ್ತ ವರದಿ ಅನುಸಾರ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ 2020ರಲ್ಲಿಆದೇಶಿಸಿತ್ತು.
ಆ ಆದೇಶವನ್ನು ಜಾರಿಗೊಳಿಸಿಲ್ಲವೆಂದು ಸಮಾಜ ಪರಿವರ್ತನಾ ಸಮುದಾಯವು ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಭೂಮಿ ಒತ್ತುವರಿ ಪತ್ತೆ ಮಾಡಲು ರಾಜ್ಯ ಸರಕಾರ 2025ರ ಜ.28ರಂದು ಎಸ್‌ಐಟಿ ರಚಿಸಿ ಆದೇಶಿಸಿತ್ತು. ಇದು ಕಾನೂನಿಗೆ ಅನುಗುಣವಾಗಿಲ್ಲ. ಆದ್ದರಿಂದ ಅದನ್ನು ರದ್ದುಗೊಳಿಸಬೇಕೆಂದು ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು<>